ಬೇಡಿಕೆ ಈಡೇರಿಸದಿದ್ರೆ ವಿಡಿಯೋ ಅಪ್ಲೋಡ್- ಮೂವರು ಯುವಕರಿಂದ ಬ್ಲ್ಯಾಕ್‍ಮೇಲ್

– ಅಪ್ರಾಪ್ತೆಯ ಸ್ನಾನದ ವಿಡಿಯೋ ರೆಕಾರ್ಡ್
– ಬೆಂಕಿ ಹಚ್ಚಿಕೊಂಡ 15ರ ಹುಡುಗಿ

ಚೆನ್ನೈ: ಮೂವರು ಯುವಕರು ಬ್ಲ್ಯಾಕ್‍ಮೇಲ್ ಮಾಡಿದ್ದರಿಂದ ಅಪ್ರಾಪ್ತ ಹುಡುಗಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿದ ವೆಲ್ಲೂರಿನಲ್ಲಿ ನಡೆದಿದೆ.

ಆರೋಪಿಗಳಾದ ಮೂವರು ಸಂತ್ರಸ್ತೆಯ ನೆರೆಹೊರೆಯವರು ಎಂದು ತಿಳಿದುಬಂದಿದೆ. 15 ವರ್ಷದ ಹುಡುಗಿ ಸ್ನಾನ ಮಾಡುವಾಗ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಸಂತ್ರಸ್ತೆ ಸ್ನಾನ ಮಾಡುವಾಗ ಆರೋಪಿಗಳು ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಆರೋಪಿಗಳು ಸಂತ್ರಸ್ತೆಯ ಬಳಿ ತಮ್ಮ ಲೈಂಗಿಕ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡಲು ಶುರುಮಾಡಿದ್ದಾರೆ. ಆರೋಪಿಗಳು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಬಹುದೆಂಬ ಭಯದಿಂದ ಸಾಯುವ ನಿರ್ಧಾರ ಮಾಡಿದ್ದಾಳೆ.

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಬೆಂಕಿಯನ್ನು ನೋಡಿದ ನೆರೆಹೊರೆಯವರು ಸುಮಾರು 30 ನಿಮಿಷಗಳ ನಂತರ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅಂಬುಲೆನ್ಸ್ ಮೂಲಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆ ಶೇ.90ರಷ್ಟು ಭಾಗ ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಘಟನೆಯ ಬಗ್ಗೆ ಸಂತ್ರಸ್ತೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ಆರೋಪಿಗಳನ್ನು ಕೆ.ಆಕಾಶ್, ಆರ್.ಗಣಪತಿ ಮತ್ತು 17 ವರ್ಷದ ಹುಡುಗ ಎಂದು ಹೇಳಿದ್ದಾಳೆ. ತನ್ನ ಹೇಳಿಕೆ ನೀಡಿದ ಕೆಲವೇ ನಿಮಿಷಗಳಲ್ಲಿ ಸಂತ್ರಸ್ತೆ ಪ್ರಜ್ಞಾಹೀನಳಾಗಿದ್ದಾಳೆ. ಸದ್ಯಕ್ಕೆ ಆಕೆಯ ಸ್ಥಿತಿ ಗಂಭೀರವಾಗಿದೆ.

ಆರೋಪಿಗಳ ಮೇಲೆ ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಶುಭಾ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *