ಬೆಳೆ ವೀಕ್ಷಿಸಿ ರೈತರ ಅಹವಾಲು ಆಲಿಸಿದ ಡಿಕೆಶಿ

ಧಾರವಾಡ: ಧಾರವಾಡ ಜಿಲ್ಲಾ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿ ರೈತರ ಅಹವಾಲು ಆಲಿಸಿದರು.

ಧಾರವಾಡ ಸಮೀಪದ ರಾಯಾಪುರದ ಅಮರಗೋಳ ಬಳಿಯ ಜಮೀನುಗಳಿಗೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಕೋವಿಡ್ ಲಾಕ್‍ಡೌನ್ ವೇಳೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ರೈತರು ಬೆಳೆದ ಮೆಣಿಸಿನಕಾಯಿ, ಟೊಮ್ಯಾಟೊ, ಗಜ್ಜರಿ, ಬೀಟ್‍ರೂಟ್ ಸೇರಿದಂತೆ ಇತರೆ ತರಕಾರಿ ಬೆಳೆ ವೀಕ್ಷಣೆ ಮಾಡಿ ರೈತರು ಲಾಕಡೌನ್ ವೇಳೆ ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಪರದಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದರು. ಇದನ್ನು ಓದಿ:ಪ್ರಧಾನಿ ಮೋದಿಯವರಿಂದ ಐತಿಹಾಸಿಕ ಆಡಳಿತ- ಪ್ರಲ್ಹಾದ್ ಜೋಶಿ

ಈ ವೇಳೆ ರೈತರ ಜೊತೆ ಕೆಲ ಕಾಲ ಸಂವಾದ ನಡೆಸಿ ರೈತರಿಂದ ಮಾಹಿತಿ ಸಂಗ್ರಹಿಸಿದ ಡಿಕೆಶಿ, ಸರ್ಕಾರ ಲಾಕ್‍ಡೌನ್ ವೇಳೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ರೈತರ ಬೆಳೆ ಬೆಳೆಗಳ ಮಾರಾಟಕ್ಕೆ ಸೂಕ್ತ ವ್ಯವ್ಯಸ್ಥೆ ಕಲ್ಪಿಸುತ್ತಿಲ್ಲವೆಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ಸರ್ಕಾರ ಕಳೆದ ಬಾರಿ ಘೋಷಿಸಿದ ಪರಿಹಾರವೇ ಇನ್ನೂ ತಲುಪಿಲ್ಲ. ಇದೀಗ ಮತ್ತೊಮ್ಮೆ ಪರಿಹಾರ ಘೋಷಿಸಿದೆ. ಅದು ಅವೈಜ್ಞಾನಿಕವಾಗಿದೆ ಎಂದು ಕಿಡಿಕಾರಿದರು.

ಲಾಕ್‍ಡೌನ್ ವೇಳೆ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಹೆಚ್ಚಿನ ಸಮಯಾವಕಾಶ ಕಲ್ಪಿಸಬೇಕು ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನ ಸರಿಪಡಿಸಬೇಕೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Comments

Leave a Reply

Your email address will not be published. Required fields are marked *