ಬೆಳಗ್ಗೆ ತಾಯಿಯ ಮುಂದೆ ಮಗಳ ಕಿಡ್ನಾಪ್- ಮಧ್ಯಾಹ್ನ ಮದ್ವೆ

– ತನಿಖೆ ವೇಳೆ ಬಯಲಾಯ್ತು ಯುವತಿಯ ಲವ್ ಸ್ಟೋರಿ
– ಓಡಿ ಹೋಗಲು ಕಿಡ್ನ್ಯಾಪ್ ಡ್ರಾಮಾ
– ನನ್ನ ಮಗಳನ್ನ ಬಿಟ್ಬಿಡಿ ಎಂದು ಗೋಗರೆದ ತಾಯಿ
– ಅಪಹರಣ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಚಂಡೀಗಢ: ತಾಯಿಯ ಮುಂದೆಯೇ ಮಗಳ ಅಪಹರಣದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇಂದು ಬೆಳಗ್ಗೆ ನಡೆದ ಪ್ರಕರಣ ಸಂಜೆ ವೇಳೆಗೆ ಹಲವು ತಿರುವುಗಳನ್ನು ಪಡೆದುಕೊಂಡು ಮದುವೆಯ ಸ್ವರೂಪ ಪಡೆದುಕೊಂಡಿದೆ. ಯುವತಿಯ ಸಮ್ಮತಿಯ ಮೇರೆಗೆ ಅಪಹರಣ ನಡೆದಿರೋದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹರಿಯಾಣದ ಝಜ್ಜರ್ ಪಟ್ಟಣದ ಛಾವಣಿ ಬಡಾವಣೆಯಲ್ಲಿ ಇಂದು ಬೆಳಗ್ಗೆ ತಾಯಿ ಮುಂದೆಯೇ ನಡೆದ ಮಗಳ ಪಹರಣ ಪ್ರಕರಣ ಇಡೀ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಸಂಜೆ ವೇಳೆ ಯುವತಿ ಆರ್ಯ ಸಮಾಜದ ಮಂದಿರದಲ್ಲಿ ಮದುವೆ ಆಗೋ ಮೂಲಕ ಪೋಷಕರಿಗೆ ಶಾಕ್ ನೀಡಿದ್ದಾರೆ. ಅಪಹರಣ ಮೊದಲೇ ಪ್ಲಾನ್ ಆಗಿದ್ದರಿಂದ ಯುವತಿ ಜೊತೆ ತನ್ನ 10ನೇ ಕ್ಲಾಸ್ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ಹೋಗಿದ್ದಾಳೆ. ಒಂದು ತಿಂಗಳ ಹಿಂದೆಯೇ ಯುವತಿಗೆ 18 ವರ್ಷ ತುಂಬಿತ್ತು ಎಂದು ವರದಿಯಾಗಿದೆ.

ಬೆಳಗ್ಗೆ ಯುವತಿಯ ಹೈಡ್ರಾಮಾ: ಬೆಳಗ್ಗೆ ಯುವತಿ ತಾಯಿ ಜೊತೆ ಟೈಲರಿಂಗ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಳು. ಈ ವೇಳೆ ಕಾರಿನಲ್ಲಿ ಬಂದ ಕೆಲ ಯುವಕರು ಯುವತಿಯನ್ನು ಕಾರಿನೊಳಗೆ ಎಳೆದುಕೊಂಡಿದ್ದಾರೆ. ತಾಯಿ ಮಗಳನ್ನು ರಕ್ಷಿಸಲು ಮುಂದಾಗಿ, ಯುವಕರಲ್ಲಿ ಪುತ್ರಿಯನ್ನು ಬಿಟ್ಟುಬಿಡಿ ಎಂದು ಕಣ್ಣೀರು ಹಾಕಿದ್ದಾಳೆ. ಇದೆಲ್ಲಾ ಡ್ರಾಮಾ ಎಂದು ಗೊತ್ತಿದ್ದರೂ ಯುವತಿ ಕಾರ್ ನಲ್ಲಿ ಬಂದವರ ಜೊತೆ ಎಸ್ಕೇಪ್ ಆಗಿದ್ದಾಳೆ. ಮಗಳ ಪ್ಲಾನ್ ಅರಿಯದ ಮುಗ್ಧ ತಾಯಿ ಮಾತ್ರ ಕಾರಿನ ಹಿಂದೆ ಓಡಿ ಹೋಗ್ತಿರೋ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದಾಗ ಯುವತಿಯ ಹೈಡ್ರಾಮಾ ಬೆಳಕಿಗೆ ಬಂದಿದೆ. ಜಿಂದ್ ಜಿಲ್ಲೆಯಲ್ಲಿದ್ದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆಕೆಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *