ಬೆಳಗಾವಿಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ- ಲಕ್ಷ್ಮಣ್ ಸವದಿ

ಬಳ್ಳಾರಿ: ಚರ್ಚೆ ಮಾಡಿದ ಮಾತ್ರಕ್ಕೆ ಭಿನ್ನಮತ ಇದೆ ಎಂದಲ್ಲ, ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿರುವುದು ಅವರ ವೈಯಕ್ತಿಕ ವಿಷಯ. ರಮೇಶ್ ಕತ್ತಿ ತಮ್ಮ ಬೇಡಿಕೆ ಹೇಳಿದ್ದಾರೆ. ಇದರಲ್ಲಿ ತಪ್ಪಿಲ್ಲ. ಬೆಳಗಾವಿಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ಮೂಲಕ ಬೆಳಗಾವಿ ಶಾಸಕರ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.

ಕೆಲ ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಶಾಸಕರ ಹೈ ಡ್ರಾಮಾ ಕುರಿತು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುರಗೇಶ್ ನಿರಾಣಿ ಅವರ ಮನೆಯಲ್ಲಿ ಎಲ್ಲರೂ ಸೇರಿದ್ದು ನಿಜ. ಅವರ ಬೆಂಗಳೂರಿನ ಮನೆಯಲ್ಲಿ ಭೋಜನ ಕೂಟ ಮಾಡಿದ್ದಾರೆ. ನಾನೂ ಈ ಹಿಂದೆ ನಮ್ಮ ಮನೆಯಲ್ಲಿ ಭೋಜನ ಕೂಟ ಮಾಡಿಸಿದ್ದೆ. ಲಾಕ್‍ಡೌನ್ ಸಂದರ್ಭದಲ್ಲಿ ಊಟ ಎಲ್ಲೂ ಸಿಗುತ್ತಿರಲಿಲ್ಲ. ಹೀಗಾಗಿ ಅವರು ಊಟಕ್ಕೆ ಸೇರಿದ್ದಾರೆ. ರಾಜಕೀಯ ಬದಲಾವಣೆ ಬಗ್ಗೆ ಚರ್ಚೆ ಮಾಡಿರಬಹುದು. ಆದರೆ ಯಡಿಯೂರಪ್ಪನವರೇ ನಮ್ಮ ನಾಯಕರು. ಬೆಳಗಾವಿಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಪಕ್ಷದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಎಲ್ಲರನ್ನೂ ಕರೆದು ಮಾತುಕತೆ ನಡೆಸಿ, ಸರಿ ಮಾಡುತ್ತಾರೆ ಎಂದು ತಿಳಿಸಿದರು.

ಸಾರಿಗೆ ಇಲಾಖೆ 1,800 ಕೋಟಿ ರೂ. ನಷ್ಟ ಅನುಭವಿಸಿದೆ. ಬಸ್ ಸಂಚಾರ ಆರಂಭಿಸಿದ ನಂತರ ನಷ್ಟದ ಪ್ರಮಾಣ ಹೆಚ್ಚಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸಂಚರಿಸಬೇಕಾಗಿರುವುದರಿಂದ ನಷ್ಟ ಹೆಚ್ಚಾಗಿದೆ. ಪ್ರತಿ ಕಿ.ಮೀ.ಗೆ 22 ರೂಪಾಯಿ ಹಾನಿಯಾಗುತ್ತಿದೆ. ನಾಲ್ಕು ನಿಗಮದಲ್ಲಿ ಪ್ರತಿ ದಿನ 6 ಕೋಟಿ ರೂ. ನಷ್ಟವಾಗುತ್ತಿದೆ. ಇದನ್ನು ಸರಿದೂಗಿಸುವುದು ಸದ್ಯಕ್ಕೆ ಕಷ್ಟಕರ. ಸಾರಿಗೆ ಇಲಾಖೆಯ ನಷ್ಟ ಭರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಕೆಂಪು ವಲಯ ಬಿಟ್ಟು ಎಲ್ಲ ಕಡೆಗಳಲ್ಲಿ ಬಸ್ ಸಂಚಾರ ಆರಂಭ ಮಾಡಲು ಚಿಂತನೆ ನಡೆದಿದೆ. ಅಂತರ್ ರಾಜ್ಯ ಬಸ್ ಸೇವೆ ಆರಂಭಿಸಲು ಸಹ ಚಿಂತನೆ ನಡೆದಿದೆ. ಕೆಲ ನೌಕರರನ್ನು ತೆಗೆದು ಹಾಕಲಾಗುವುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಆ ರೀತಿಯ ಚಿಂತನೆ ನಮಲ್ಲಿ ಇಲ್ಲ. ಯಾರೂ ಹೆದರಿಕೆಗೆ ಒಳಗಾಗಬಾರದು. ಆದರೆ ಕೆಲ ಹೆಚ್ಚುವರಿ ನೌಕರರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಕರೊನಾ ನಿಯಂತ್ರಣದಲ್ಲಿತ್ತು. ತಬ್ಲಿಘಿ, ಜುಬ್ಲಿಯಂಟ್ ಹಾಗೂ ಮಹಾರಾಷ್ಟ್ರದಿಂದ ಹೆಚ್ಚಿನ ಸೋಂಕು ಹರಡಿದೆ. ಮಹಾರಾಷ್ಟ್ರದ ಕನ್ನಡಿಗರು ಹೆಚ್ಚಾಗಿ ಮನವಿ ಮಾಡಿದರು. ಅನಿವಾರ್ಯವಾಗಿ ಅವರನ್ನು ರಾಜ್ಯಕ್ಕೆ ಕರೆಸಬೇಕಾಯಿತು. ರಾಜ್ಯದಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಿಂದ ಸೋಂಕು ಹೆಚ್ಚಾಗಿದೆ. ಪ್ರತಿದಿನ ಸರ್ಕಾರಕ್ಕೆ ಹೊಸ ಸವಾಲು ಕಾಡುತ್ತಿದೆ. ರಾಜ್ಯದಲ್ಲಿ ನುಸುಳಿಕೊಂಡು ಬಂದವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಕ್ವಾರಂಟೈನ್ ಅವಧಿಯನ್ನು ಕಡಿಮೆ ಮಾಡಿದೆ. ಸೋಂಕಿನ ಜೊತೆಯಲ್ಲಿ ಬದುಕುವುದು ನಮಗೆ ಅನಿವಾರ್ಯವಾಗಿದೆ ಎಂದರು.

Comments

Leave a Reply

Your email address will not be published. Required fields are marked *