ಬೆಳಗಾವಿಯಲ್ಲಿ ಪ್ರತಿಮೆ ಪಾಲಿಟಿಕ್ಸ್- ರಾಯಣ್ಣ ಪ್ರತಿಮೆ ಸ್ಥಳದಲ್ಲೇ ಶಿವಾಜಿ ಪ್ರತಿಮೆ ಸ್ಥಾಪಿಸಲು ಯತ್ನ

– ರಾತ್ರೋ ರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ
– ಎಂಇಎಸ್ ಕಾರ್ಯಕರ್ತರ ಬಂಧನ

ಬೆಳಗಾವಿ: ರಾಯಣ್ಣ ಪ್ರತಿಮೆ ವಿವಾದ ತೀವ್ರ ಸ್ವರೂಪ ಪಡೆದಿದೆ. ಬೆಳಗಾವಿಯ ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಲಾಗಿದೆ.

ಕನ್ನಡಪರ ಹೋರಾಟಗಾರರು ಮತ್ತು ರಾಯಣ್ಣನ ಅಭಿಮಾನಿಗಳು ಪೀರನವಾಡಿಗೆ ತೆರಳಿ ಪ್ರತಿಮೆ ಸ್ಥಾಪನೆ ಮಾಡಿ, ರಾಯಣ್ಣನಿಗೆ ಜೈಕಾರ ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ನಿನ್ನೆ ರಾಯಣ್ಣ ಅಭಿಮಾನಿಗಳು ಬೆಳಗಾವಿ ಚಲೋ ಹಮ್ಮಿಕೊಂಡಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಿರಲಿಲ್ಲ. ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ರಾಜ್ಯ ಕುರುಬರ ಸಂಘ ಮತ್ತು ಕನ್ನಡ ಸಂಘಟನೆಯ ನೂರಾರು ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದರು. ನಾಳೆ ಸಚಿವ ಈಶ್ವರಪ್ಪ ಜೊತೆ ಮಾತುಕತೆ ನಡೆಸಿ ವಿವಾದ ಇತ್ಯರ್ಥ ಮಾಡುತ್ತೇನೆ ಎಂದಿದ್ದರು.

ಇತ್ತ ರಾತ್ರೋರಾತ್ರಿ ಪೀರನವಾಡಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಮರಾಠಿ ಭಾಷಿಕರು, ಮೂರ್ತಿ ಪ್ರತಿಷ್ಠಾಪನೆ ಬೆನ್ನಲ್ಲೇ ಬೆಳ್ಳಂಬೆಳಗ್ಗೆ ಶಿವಾಜಿ ಮೂರ್ತಿ ಸ್ಥಾಪನೆಗೆ ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಶಿವಾಜಿ ಮೂರ್ತಿಯನ್ನು ವಶಕ್ಕೆ ಪಡೆದುಕೊಂಡರು. ಅಲ್ಲದೇ ಶಿವಾಜಿ ಮೂರ್ತಿ ಪ್ರತಿಮೆ ಸ್ಥಾಪನೆ ಮಾಡಲು ಬಂದ ಎಂಇಎಸ್ ಕಾರ್ಯಕರ್ತರನ್ನು ಬಂಧಿಸಿದರು. ಈ ವೇಳೆ ಪೊಲೀಸರ ಹಾಗೂ ಮರಾಠಿ ಭಾಷಿಕರ ನಡುವೆ ವಾಗ್ವಾದ ನಡೆಯಿತು. ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿರುವುದರಿಂದ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಭೇಟಿ ನೀಡುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *