‘ಬೆಲ್ ಬಾಟಂ 2’ ಚಿತ್ರಕ್ಕೆ ಪವರ್ ಸ್ಟಾರ್ ಚಾಲನೆ – ಮತ್ತೆ ಬಂದ್ರು ಡಿಟೆಕ್ಟಿವ್ ದಿವಾಕರ್.!!

ಬೆಲ್ ಬಾಟಂ ಸಿನಿಮಾ ಮೂಲಕ ಯಶಸ್ಸು ಕಂಡ ರಿಷಭ್ ಶೆಟ್ಟಿ – ನಿರ್ದೇಶಕ ಜಯತೀರ್ಥ ಜೋಡಿ ಮತ್ತೆ ಒಂದಾಗಿದ್ದಾರೆ. ‘ಬೆಲ್ ಬಾಟಂ 2’ ಚಿತ್ರದ ಮೂಲಕ ಈ ಜೋಡಿ ಮತ್ತೆ ಭರಪೂರ ಮನರಂಜನೆ ನೀಡಲು ಸಜ್ಜಾಗಿದ್ದು ಹೊಸ ಕೇಸ್‍ನೊಂದಿಗೆ ಥ್ರಿಲ್ ನೀಡೋಕೆ ಬರ್ತಿದ್ದಾರೆ. ಬಹು ನಿರೀಕ್ಷಿತ ‘ಬೆಲ್ ಬಾಟಂ 2’ ಚಿತ್ರ ಸೆಟ್ಟೇರಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.

ಬೆಲ್ ಬಾಟಂ ಸೀಕ್ವೆಲ್ ಯಾವಾಗ ಬರುತ್ತೆ ಎಂಬ ಸಿನಿರಸಿಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಬಾರಿ ಚೆಂಡು ಹೂ ಕೇಸ್ ರಹಸ್ಯ ಭೇದಿಸಲು ಡಿಟೆಕ್ಟಿವ್ ದಿವಾಕರ್ ರೆಡಿಯಾಗಿದ್ದಾರೆ. ಟೈಟಲ್  ಫೋಸ್ಟರ್‌ನಲ್ಲಿರುವ ಕ್ಯೂರಿಯಸ್ ಕೇಸ್ ಆಫ್ ಚೆಂಡುವ ಎಂಬ ಟ್ಯಾಗ್‍ಲೈನ್ ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿದೆ. ಮೊದಲ ಭಾಗದಂತೆ ‘ಬೆಲ್ ಬಾಟಂ 2’ ಕೂಡ ಸಖತ್ ಥ್ರಿಲ್ಲಿಂಗ್‍ನಿಂದ ಕೂಡಿರಲಿದೆ ಎಂದು ಚಿತ್ರತಂಡ ತಿಳಿಸಿದ್ದು, 80ರ ದಶಕದ ರೆಟ್ರೋ ಮಾದರಿಯಲ್ಲೇ ಚಿತ್ರ ಮೂಡಿಬರಲಿದೆ. ಮೊದಲ ಭಾಗಕ್ಕೆ ಕಥೆ ಬರೆದಿದ್ದ ಟಿ.ಕೆ.ದಯಾನಂದ್ ಬೆಲ್ ಬಾಟಂ ಸೀಕ್ವೆಲ್‍ಗೂ ಕಥೆ ಬರೆದಿದ್ದಾರೆ.

ಹರಿಪ್ರಿಯಾ ಜೊತೆ ಈ ಬಾರಿ ನಟಿ ತಾನ್ಯ ಹೋಪ್ ‘ಬೆಲ್ ಬಾಟಂ 2’ ಅಂಗಳಕ್ಕೆ ಹೊಸದಾಗಿ ಎಂಟ್ರಿಕೊಟ್ಟಿದ್ದು, ಪ್ರಮೋದ್ ಶೆಟ್ಟಿ, ಯೋಗರಾಜ್ ಭಟ್, ಪಿ.ಪಿ. ಸತೀಶ್‍ಚಂದ್ರ, ಸುಜಯ್ ಶಾಸ್ತ್ರಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಬೆಲ್ ಬಾಟಂ ಮೊದಲ ಭಾಗ ನಿರ್ಮಾಣ ಮಾಡಿ ಭರ್ಜರಿ ಯಶಸ್ಸು ಕಂಡಿದ್ದ ನಿರ್ಮಾಪಕ ಸಂತೋಷ್ ಕುಮಾರ್. ಕೆ.ಸಿ ಅವರೇ ‘ಬೆಲ್ ಬಾಟಂ 2’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿ ಶೂಟಿಂಗ್ ಸಿದ್ಧತೆಯಲ್ಲಿರುವ ಡಿಟೆಕ್ಟಿವ್ ದಿವಾಕರ್ ಅಂಡ್ ಟೀಂ ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿದೆ.

 

Comments

Leave a Reply

Your email address will not be published. Required fields are marked *