ಬೆದರಿಸಿ ಹಣ ನೀಡದೇ ಮಟನ್ ಬಿರಿಯಾನಿ ಕಟ್ಟಿಸಿಕೊಂಡ ಪೊಲೀಸರು!

– ಪುಟ್ಟ ಬಂಡಿಯಲ್ಲಿ ವ್ಯಾಪಾರ ಮಾಡ್ತಿದ್ದ ಬಡವ
– ವೀಡಿಯೋ ವೈರಲ್ ಬಳಿಕ ಇಬ್ಬರ ವರ್ಗಾವಣೆ

ಲಕ್ನೋ: ಬೀದಿ ಬದಿ ವ್ಯಾಪಾರಿಗೆ ಬೆದರಿಸಿ ಹಣ ನೀಡದೇ ಮಟನ್ ಬಿರಿಯಾನಿ ಕಟ್ಟಿಸಿಕೊಂಡ ಪೊಲೀಸರಿಬ್ಬರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ವೈರಲ್ ಬಳಿಕ ಇಬ್ಬರನ್ನ ವರ್ಗಾವಣೆಗೊಳಿಸಲಾಗಿದೆ.

ಉತ್ತರ ಪ್ರದೇಶದ ಐಶ್‍ಬಾಗ್ ಈದ್ಗಾ ಬಳಿ ಶಬ್ಬೀರ್ ಎಂಬವರು ತಳ್ಳುವ ಬಂಡಿಯಲ್ಲಿ ಬಿರಿಯಾನಿ ಅಂಗಡಿ ಹಾಕಿಕೊಂಡಿದ್ದಾರೆ. ಎಂದಿನಂತೆ ಗುರುವಾರ ಸಹ ಶಬ್ಬೀರ್ ವ್ಯಾಪಾರ ಮಾಡುತ್ತಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಪೊಲೀಸ್ ಪೇದೆಗಳಾದ ಮೊಹಮದ್ ಫೈಜ್ ಮತ್ತು ರಮನ್ ಎರಡು ಪ್ಲೇಟ್ ಮಟನ್ ಬಿರಿಯಾನಿ ಪಾರ್ಸೆಲ್ ತಗೆದುಕೊಂಡಿದ್ದಾರೆ.

ಪೊಲೀಸರು ಹೇಳಿದಂತೆ ಶಬ್ಬೀರ್ ಎರಡು ಪ್ಯಾಕೇಟ್ ನೀಡಿ ಹಣ ಕೇಳಿದ್ದಾರೆ. ಆದ್ರೆ ಇಬ್ಬರೂ ವ್ಯಾಪಾರಿಗೆ ಬೆದರಿಸಿ ಹಣ ನೀಡದೇ ಹಾಗೆ ಬೈಕ್ ನಲ್ಲಿ ತೆರಳಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ವೀಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.

ಹಣ ನೀಡಿದ ಠಾಣಾಧಿಕಾರಿ:
ಈ ವೀಡಿಯೋ ಫೈಜ್ ಮತ್ತು ರಮಣ್ ಕಾರ್ಯ ನಿರ್ವಹಿಸುತ್ತಿದ್ದ ಠಾಣೆಯ ಮೇಲಾಧಿಕಾರಿ ಧನಂಜಯ್ ಸಿಂಗ್ ಅವರ ಮೊಬೈಲ್ ಸಹ ತಲುಪಿದೆ. ವಿಷಯ ತಿಳಿಯುತ್ತಲೇ ಧನಂಜಯ್ ನೇರವಾಗಿ ವ್ಯಾಪಾರಿ ಶಬ್ಬೀರ್ ಅಂಗಡಿಗೆ ತೆರಳಿದ್ದಾರೆ. ತಮ್ಮ ಪೇದೆಗಳಿಬ್ಬರ ಪರವಾಗಿ ಕ್ಷಮೆ ಕೇಳಿ ಶಬ್ಬೀರ್ ಗೆ 500 ರೂ. ಹಣ ನೀಡಿದ್ದಾರೆ. ಇತ್ತ ಇಬ್ಬರನ್ನು ಮತ್ತೊಂದು ಠಾಣೆಗೆ ವರ್ಗಾಯಿಸಿದ್ದಾರೆ. ಇದನ್ನೂ ಓದಿ: ವ್ಯಾಪಾರಿಯ ಮೆಕ್ಕೆಜೋಳದ ತಳ್ಳುವ ಗಾಡಿ ಬೀಳಿಸಿ ದರ್ಪ ಮೆರೆದ ಪೊಲೀಸ್- ವಿಡಿಯೋ ವೈರಲ್

ವೀಡಿಯೋ ನೋಡಿ ನನಗೂ ಶಾಕ್ ಆಯ್ತು. ಕೂಡಲೇ ವ್ಯಾಪಾರಿಗೆ ಹಣ ಹಿಂದಿರುಗಿಸಲಾಗಿದೆ. ಈ ಸಂಬಂಧ ಆಂತರಿಕ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಧನಂಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವ್ಯಾಪಾರಿಗಳ ಮೇಲೆ ಖಾಕಿ ಖದರ್-ಕಾಲಿನಿಂದ ತರಕಾರಿ ಒದ್ದು ಪಿಎಸ್‍ಐ ದರ್ಪ

ಈ ಕುರಿತು ಪ್ರತಿಕ್ರಿಯಿಸಿರುವ ಎಡಿಸಿಪಿ ರಾಜೇಶ್ ಶ್ರೀವಾತ್ಸವ್, ಹಣ ನೀಡದೇ ಬೆದರಿಸಿ ಊಟ ಪಡೆದಿರೋದು ತಪ್ಪು. ವೀಡಿಯೋ ನಮ್ಮ ಗಮನಕ್ಕೆ ಬರುತ್ತಿದ್ದಂತೆ ಠಾಣಾಧಿಕಾರಿಗಳ ಮೂಲಕ ವ್ಯಾಪಾರಿಗೆ ಹಣ ತಲುಪಿಸಲಾಗಿದೆ. ಇಬ್ಬರು ಪೊಲೀಸ್ ಪೇದೆಗಳನ್ನು ವರ್ಗಾವಣೆಗೊಳಿಸಿ ಕೇವಲ ಠಾಣೆಯ ಕೆಲಸಕ್ಕೆ ನೇಮಿಸಲಾಗಿದೆ. ಈ ರೀತಿಯಲ್ಲಿ ಯಾವುದೇ ಚಟುವಟಿಕೆಗಳು ಕಂಡು ಬಂದಲ್ಲಿ ತಮ್ಮ ಗಮನಕ್ಕೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮೊಟ್ಟೆ ಕದ್ದ ಪೊಲೀಸ್- ವೀಡಿಯೋ ವೈರಲ್

Comments

Leave a Reply

Your email address will not be published. Required fields are marked *