ಬೆಣ್ಣೆ ನಗರಿಗೆ ಜನರಿಂದ ಕೊರೊನಾಮ್ಮನ ಜಾತ್ರೆ

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಬೆಣ್ಣೆ ನಗರಿಯಲ್ಲಿ ನೂರಾರು ಮಂದಿ ಸೇರಿಕೊಂಡು ಕೊರೊನಾಮ್ಮನ ಜಾತ್ರೆ ಮಾಡಿದ್ದಾರೆ.

ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಹೀಗಾಗಿ ಮಹಾಮಾರಿ ಕೊರೊನಾ ನಿವಾರಣೆಗಾಗಿ ಜನರು ಕೊರೊನಾಮ್ಮನ ಪೂಜೆ ಮಾಡಿದ್ದಾರೆ.

ನಿರ್ಬಂಧದ ಹಿನ್ನೆಲೆಯಲ್ಲಿ ದೇವಸ್ಥಾನ ಬಾಗಿಲನ್ನು ಬಂದ್ ಮಾಡಲಾಗಿದೆ. ಆದರೂ ನಗರದ ನಿಟ್ಟುವಳ್ಳಿ ದುರ್ಗಾಂಬಿಕ ದೇವಸ್ಥಾನದ ಹೊರಗಡೆ ಭಕ್ತರು ಬಂದು ಎಡೆ ಪೂಜೆ ಮಾಡಿಸಿ ತೆರಳುತ್ತಿದ್ದಾರೆ.

ಕೊರೊನಾ ತೊಲಗಮ್ಮ, ನಮ್ಮನ್ನು ಕಾಪಾಡಮ್ಮ ಎಂದು ಜನರು ಕೂಗಿ ಪೂಜೆ ಮಾಡಿದ್ದಾರೆ. ಪೊಲೀಸರು ಪೂಜೆ ಮಾಡಲು ಅನುಮತಿ ಸಿಕ್ಕಿಲ್ಲ ಎಂದು ಹೇಳಿದರೂ ಮಹಿಳೆಯರು ದೇವಾಲಯದ ಕಟ್ಟೆಗೆ ಬಂದು ಎಡೆ ಇಟ್ಟು ಹೋಗುತ್ತಿದ್ದಾರೆ.

ಎರಡು ದಿನಗಳ ಹಿಂದೆ ರಾಮನಗರ ಜಿಲ್ಲೆ ಕನಕಪುರದ ಕೊಳಗೊಂಡನಹಳ್ಳಿರುವ ದೇವಾಲಯದ ಆವರಣದಲ್ಲಿ ಜಾತ್ರೆ ಮಾಡಲಾಗಿತ್ತು. ಈ ಜಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಅಲ್ಲದೇ ಜಾತ್ರೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಜಾತ್ರೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಎಂ ಅಶ್ವಥ್ ನಾರಾಯಣ್ ಅವರು ಜಾತ್ರೆಗೆ ಅನುಮತಿ ನೀಡಿದ್ದ ಪಂಚಾಯತ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದ್ದಾರೆ.

Comments

Leave a Reply

Your email address will not be published. Required fields are marked *