ಬೆಡ್ ಸಮಸ್ಯೆ- ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವಲ್ಲಿ ವಿಳಂಬ!

ಬೆಂಗಳೂರು: ನಗರದಲ್ಲಿ ಕೊರೊನಾ ಮಹಾಮಾರಿ ತನ್ನ ಕಬಂಧಬಾಹುಗಳನ್ನು ಚಾಚುತ್ತಿದ್ದು, ಇದೇ ವೇಳೆ ನಗರದ ಕೋವಿಡ್-19 ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಎದುರಾಗಿದೆಯಾ ಎಂಬ ಅನುಮಾನ ಮೂಡಿದೆ. ನಗರದ ಮೂವರು ನಿವಾಸಿಗಳಿಗೆ ಕೊರೊನಾ ಸೋಂಕು ಖಚಿತವಾದರೂ ಕಳೆದ ಮೂರು ದಿನಗಳಿಂದ ಮನೆಯಲ್ಲೇ ಇರುವಂತೆ ಸೂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದ್ದು, ಸೋಂಕಿತರು ತಮ್ಮ ಸಮಸ್ಯೆಯನ್ನು ವಿವರಿಸಿದ್ದಾರೆ. ನಗರಪೇಟೆ ನಿವಾಸಿಗಳಾದ ಮೂವರಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿತ್ತು. ಜೂನ್ 19 ರಂದು ಸೋಂಕು ಇರುವುದು ದೃಢಪಟ್ಟಿದ್ದರು. ಕಳೆದ ಮೂರು ದಿನಗಳಿಂದ ಆಸ್ಪತ್ರೆಗೆ ಶಿಫ್ಟ್ ಮಾಡುವಲ್ಲಿ ಆರೋಗ್ಯ ಇಲಾಖೆ ವಿಳಂಬ ಮಾಡಿತ್ತು.

ಜೂನ್ 19 ರಂದು 69 ವರ್ಷದ ವೃದ್ಧನಿಗೆ ಸೋಂಕು ಇರುವುದಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಖಚಿತ ಪಡಿಸಿತ್ತು. ಅಂದು ಕುಟುಂಬಸ್ಥರಿಗೆ ಕರೆ ಮಾಡಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಬೆಡ್ ಸಮಸ್ಯೆಯಿಂದ ಮನೆಯಲ್ಲೇ ಇರುವಂತೆ ಹೇಳಿದ್ದಾರೆ. ಪರಿಣಾಮ ಸೋಂಕಿತರು ಆತಂಕದಲ್ಲಿದ್ದಾರೆ. ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ ಎಂದು ಸಿಬ್ಬಂದಿ ಹೇಳಿದರು ಕೂಡ ಮೂರು ದಿನಗಳಿಂದ ಆಸ್ಪತ್ರೆಗೆ ಶಿಫ್ಟ್ ಮಾಡಿರಲಿಲ್ಲ. ಮನೆಯಲ್ಲಿ ಮಕ್ಕಳು, ಇತರೇ ವ್ಯಕ್ತಿಗಳಿರುವ ಕಾರಣ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದರು.

ದಿನೇ ದಿನೇ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಡ್ ಖಾಲಿ ಇಲ್ಲ ಎಂದು ಮನೆಯಲ್ಲೇ ಬಿಟ್ಟರೇ ಹೇಗೆ ಎಂದು ಸೋಂಕಿತರು ಪ್ರಶ್ನೆ ಮಾಡಿದ್ದಾರೆ. 30, 28 ಹಾಗೂ 69 ವರ್ಷದ ಮೂವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವಲ್ಲಿ ತಡ ಮಾಡಲಾಗಿತ್ತು. ಈ ಕುರಿತು ಪಬ್ಲಿಕ್ ಟಿವಿ ವರದಿ ಬಿತ್ತರಿಸಿದ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ ಕೂಡಲೇ 30 ಹಾಗೂ 28 ವರ್ಷದ ಸೋಂಕಿತರನ್ನು ವಿಕ್ಟೋರಿಯಾ, ಇಎಸ್‍ಐ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 69 ವರ್ಷದ ವೃದ್ಧರನ್ನು ಶಿಫ್ಟ್ ಮಾಡುವಲ್ಲಿ ವಿಳಂಬ ಮಾಡಲಾಗಿದೆ.

Comments

Leave a Reply

Your email address will not be published. Required fields are marked *