ಬೆಡ್ ಬ್ಲಾಕಿಂಗ್ ದಂಧೆಗೆ ಕೋಮು ಬಣ್ಣ ಹಚ್ಚಿಲ್ಲ: ತೇಜಸ್ವಿ ಸೂರ್ಯ

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಗೆ ಕೋಮು ಬಣ್ಣ ಹಚ್ಚಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಬೆಡ್ ಬ್ಲಾಕಿಂಗ್ ದಂಧೆ ಬಯಲಾದ ಪರಿಣಾಮ ಕೇವಲ ನಾಲ್ಕೇ ದಿನದಲ್ಲಿ ಬೆಡ್ ನಿಗದಿ ಅವ್ಯವಹಾರಕ್ಕೆ ಬ್ರೇಕ್ ಹಾಕುವ ತಂತ್ರಾಂಶವನ್ನು ಬಿಬಿಎಂಪಿ ಕೋವಿಡ್ ವಾರ್ ರೂಂಗಳಲ್ಲಿ ಅಳವಡಿಸಲಾಗಿದೆ. ಹಿಂದೆ ಯಾರು, ಯಾರಿಗೆ, ಯಾವ ಕಂಪ್ಯೂಟರ್ ನಲ್ಲಿ ಬೆಡ್ ಬುಕ್ ಮಾಡ್ತಿದ್ರು ಅನ್ನೋದಕ್ಕೆ ದಾಖಲೆ ಇರುತ್ತಿರಲಿಲ್ಲ. ಆದ್ರೆ, ಇದೀಗ ಬೆಡ್ ಬುಕ್ ಮಾಡುವವರ ಹೆಸರು ತೋರಿಸುವ ವ್ಯವಸ್ಥೆ ಬಂದಿದೆ. ಇದು ಅಕ್ರಮ ತಡೆಗೆ ಸಹಕಾರಿಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ರು.

ಈಗ ಬೆಡ್ ಬುಕ್ ಆದ ರೋಗಿಯ ಮೊಬೈಲಿಗೆ ಎಸ್‍ಎಂಎಸ್ ಹೋಗುತ್ತೆ. ಅದರಲ್ಲಿ ರೋಗಿ ಹೆಸರು, ಬೆಡ್ ಇರೋ ಆಸ್ಪತ್ತೆ ವಿವರ ಇರುತ್ತೆ. ಈ ಎಸ್‍ಎಂಎಸ್ ತೋರಿಸಿದ್ರೆ ಸಾಕು ಆಸ್ಪತ್ರೆಯವರು ಬೆಡ್ ಕೊಡ್ತಾರೆ ಎಂದು ತೇಜಸ್ವಿ sಸೂರ್ಯ ವಿವರ ನೀಡಿದರು. ಈ ಮಹತ್ತರ ಬದಲಾವಣೆಗೆ ಸಾಫ್ಟ್‍ವೇರ್ ದಿಗ್ಗಜ ನಂದನ್ ನಿಲೇಕಣಿ, ಬಿಬಿಎಂಪಿ ಹಿರಿಯ ಅಧಿಕಾರಿಗಳು ಕಾರಣ. ಇನ್ನೂ ಹಲವು ಬದಲಾವಣೆ ಆಗಲಿವೆ. ಕೆಲವೇ ದಿನಗಳಲ್ಲಿ ಬೆಡ್ ಪಡೆಯಲು ಕ್ಯೂ ವ್ಯವಸ್ಥೆ ಬರಲಿದೆ ಅಂತಾ ತೇಜಸ್ವಿ ಸೂರ್ಯ ಹೇಳಿದರು.

ಇದೇ ವೇಳೆ, ನಾವು ಯಾರನ್ನೂ ಟಾರ್ಗೆಟ್ ಮಾಡಿರ್ಲಿಲ್ಲ ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದರು. ನಾವು ಕೋವಿಡ್ ವಾರ್ ರೂಂಗೆ ತೆರಳುವ ಮೊದಲೇ ಆ 17 ಜನರನ್ನ ಕೆಲಸದಿಂದ ತೆಗೆಯಲಾಗಿತ್ತು. ಅವರ ವಿಚಾರಣೆಯನ್ನು ಸಿಸಿಬಿ ನಡೆಸಿಯೇ ಇಲ್ಲ. ಅವರಿಗೆ ಕ್ಲೀನ್ ಚಿಟ್ ಅಂದ್ರೆ ಹೇಗೆ? ಇದು ಕಾಂಗ್ರೆಸ್‍ನ ಸುಳ್ಳು ಅಲ್ಲವೇ ಎಂದು ತೇಜಸ್ವಿ ಪ್ರಶ್ನಿಸಿದ್ರು. ನನ್ನನ್ನು ಕಸಬ್‍ಗೆ ಹೋಲಿಸಿ ತೇಜೋವಧೆ ಮಾಡಿದ್ರು. ಆದ್ರೆ ನಾನು ಇದಕ್ಕೆ ಕೋಮುಬಣ್ಣ ಹಚ್ಚಿಲ್ಲ. ವಾರ್ ರೂಂಗೆ ಹೋಗಿ ಕ್ಷಮೆಯೂ ಕೇಳಿಲ್ಲ. ಕೇಳಲ್ಲ ಕೂಡ ಅಂತಾ ತೇಜಸ್ವಿ ಸೂರ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಬೆಡ್ ಬ್ಲಾಕಿಂಗ್‍ನಲ್ಲಿ ಶಾಸಕ ಸತೀಶ್ ರೆಡ್ಡಿ ಹೆಸರು ಕೇಳಿ ಬರುತ್ತಿರೋ ಬಗ್ಗೆ ಸ್ಪಷ್ಟಪಡಿಸಿದ ತೇಜಸ್ವಿ ಸೂರ್ಯ, ಕ್ಷೇತ್ರದ ಜನರ ಪರವಾಗಿ ಬೆಡ್ ಕೇಳೋದು ತಪ್ಪಾ? ಸಿಸಿಬಿ ತನಿಖೆ ನಡೆಸುತ್ತಿದೆ. ಸತ್ಯಾಂಶ ಬಯಲಾಗಲಿದೆ ಎಂದರು.

Comments

Leave a Reply

Your email address will not be published. Required fields are marked *