ಬೆಂಗ್ಳೂರು ಮಾದರಿಯಲ್ಲಿ ಗೋಕಾಕ್ ತಾಲೂಕಿನಲ್ಲಿ ಲಾಕ್‍ಡೌನ್

ಬೆಳಗಾವಿ: ಕೊರೊನಾ ಚೈನ್ ಕಟ್ ಮಾಡುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಒಂದು ವಾರ ಲಾಕ್‍ಡೌನ್ ಮಾಡಲಾಗಿದೆ. ಇದೀಗ ಬೆಂಗಳೂರು ಮಾದರಿಯಲ್ಲಿ ಗೋಕಾಕ್ ತಾಲೂಕಿನಲ್ಲಿ 7 ರಿಂದ 10 ದಿನ ಲಾಕ್‍ಡೌನ್ ಮಾಡಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ.

ಸಂಡೇ ಲಾಕ್‍ಡೌನ್ ಮಧ್ಯೆ ಸಚಿವರಿಂದ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಮಾಡಲಾಗಿದೆ. ಗೋಕಾಕ್ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಗೋಕಾಕ್ ತಾಲೂಕಿನಲ್ಲಿ ಲಾಕ್‍ಡೌನ್‍ಗೆ ನಿರ್ಧಾರ ಮಾಡಲಾಗಿದೆ.

ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಮಂಗಳವಾರ ರಾತ್ರಿ 8 ಗಂಟೆಯಿಂದ ಗೋಕಾಕ್ ತಾಲೂಕಿನಲ್ಲಿ ಲಾಕ್‍ಡೌನ್ ಜಾರಿಯಾಗಲಿದೆ. ಕೊರೊನಾ ಚೈನ್ ಕಟ್ ಮಾಡಲು ಬೆಂಗಳೂರನ್ನು ಒಂದು ವಾರ ಲಾಕ್‍ಡೌನ್ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಶಾಸಕರು, ಅಧಿಕಾರಿಗಳು ಆಯಾ ತಾಲೂಕು ಅಧಿಕಾರಿಗಳು ಲಾಕ್‍ಡೌನ್ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ. ಯಾಕೆಂದರೆ ನಮಗೆ ಜನರ ಜೀವಕ್ಕಿಂತ ಬೇರೆ ಯಾವುದೇ ಮುಖ್ಯವಲ್ಲ. ಹೀಗಾಗಿ 7 ರಿಂದ 10 ದಿನ ಲಾಕ್‍ಡೌನ್ ಜಾರಿ ಮಾಡಲಾಗುತ್ತಿದೆ.

ಗೋಕಾಕ್ ಜನರು ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್‍ಗೆ ಸಲಹೆ ಕೊಟ್ಟಿದ್ದಾರೆ. ಲಾಕ್‍ಡೌನ್ ವೇಳೆ ಹಾಲು, ತರಕಾರಿ ಅಗತ್ಯ ಸೇವೆ ಪೂರೈಕೆ ಮಾಡುತ್ತೇವೆ. ಜನರು ಯಾರೂ ಮನೆಯಿಂದ ಹೊರಗೆ ಬರಬಾರದು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಅಂಗಡಿ ತೆರೆಯಲು ಕೂಡ ಅವಕಾಶ ಇಲ್ಲ. ಈ ಬಾರಿ ಕೊರೊನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಗೋಕಾಕ್‍ನಲ್ಲಿ ಕಠಿಣ ಲಾಕ್‍ಡೌನ್ ಜಾರಿ ಮಾಡಲಾಗುತ್ತಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

Comments

Leave a Reply

Your email address will not be published. Required fields are marked *