ಬೆಂಗ್ಳೂರಲ್ಲಿ ಒಂಬತ್ತೇ ದಿನದಲ್ಲಿ ಕೊರೊನಾ ಗೆದ್ದ 99 ವರ್ಷದ ಅಜ್ಜಿ

– ಮಗ, ಸೊಸೆ ಇನ್ನೂ ಆಸ್ಪತ್ರೆಯಲ್ಲಿ

ಬೆಂಗಳೂರು: ತನ್ನ 99ನೇ ವಯಸ್ಸಿನಲ್ಲಿ ಅಜ್ಜಿಯೊಬ್ಬರು ಕೇವಲ ಒಂಬತ್ತೇ ದಿನಕ್ಕೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಈ ಅಜ್ಜಿ ಜೊತೆ ಆತನ ಮಗ ಮತ್ತು ಸೊಸೆಗೂ ಕೊರೊನಾ ಸೋಂಕು ತಗಲಿತ್ತು. ಆದರೆ ಶುಕ್ರವಾರ ಅಜ್ಜಿ ಕೊರೊನಾದಿಂದ ಸಂಪೂರ್ಣ ಗುಣವಾಗಿ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಜ್ಜಿಗಿಂತ ಚಿಕ್ಕವರಾದ ಆಕೆಯ ಮಗ ಮತ್ತು ಸೊಸೆ ಮಾತ್ರ ಇನ್ನೂ ಗುಣವಾಗದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನಲ್ಲಿ ವಾಸವಿದ್ದ ಅಜ್ಜಿಯ ಸೊಸೆಗೆ ಮೊದಲು ಕೊರೊನಾ ಪಾಸಿಟಿವ್ ಅನ್ನೋದು ಗೊತ್ತಾಗಿತ್ತು. ಜೊತೆಗೆ ಅಜ್ಜಿಯ ಮಗ ಹಾಗೂ ಮೊಮ್ಮಗನಿಗೂ ಪಾಸಿಟಿವ್ ಇತ್ತು. ಇವರ ಜೊತೆ ಪ್ರಾಥಮಿಕ ಸಂಪರ್ಕದಲಿದ್ದ ಅಜ್ಜಿಗೂ ಕೊರೊನಾ ಪಾಸಿಟಿವ್ ಬಂದಿದೆ. ಆ ನಂತರ ಜೂನ್ 18ರಂದು ಇಡೀ ಕುಟುಂಬ ವಿಕ್ಟೋರಿಯಾ ಆಸ್ಪತ್ರೆಯ ಕೊರೊನಾ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಈಗ ಅಜ್ಜಿ ಮಾತ್ರ ಗುಣಮುಖರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು, ಅಜ್ಜಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಹೈಪರ್ ಟೆನ್ಶನ್ ಸಮಸ್ಯೆ ಬಿಟ್ಟರೆ ಬೇರೆ ಯಾವ ತೊಂದರೆಯೂ ಇರಲಿಲ್ಲ. ಅಜ್ಜಿಗೆ ಕೊರೊನಾ ಗುಣಲಕ್ಷಣವೂ ಇರಲಿಲ್ಲ. ಮೈಲ್ಡ್ ಆಕ್ಸಿಜನ್ ವ್ಯವಸ್ಥೆ ಅಜ್ಜಿಗೆ ನೀಡಲಾಯ್ತು. ಈಗ ನಿನ್ನೆ ಎರಡು ಬಾರಿ ಸ್ವಾಬ್ ಟೆಸ್ಟ್ ಮಾಡಿದಾಗ ರಿಪೋರ್ಟ್ ನೆಗೆಟಿವ್ ಬಂದಿದೆ. ಅಜ್ಜಿ ನಿನ್ನೆ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಅಜ್ಜಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಆದರೆ ಅವರ ಮಗ ಮತ್ತು ಸೊಸೆ ಮಾತ್ರ ಇನ್ನೂ ರಿಕವರಿಯಾಗದೇ ಆಸ್ಪತ್ರೆಯಲ್ಲೇ ಇದ್ದಾರೆ. ಆ ಊಟ ಕೊಡಿ ಈ ಊಟ ಕೊಡಿ ಎನ್ನುವ ಯಾವ ಡಿಮ್ಯಾಂಡ್ ಕೂಡ ಅಜ್ಜಿ ಮಾಡುತ್ತಿರಲಿಲ್ಲ. ತುಂಬಾ ಚೆನ್ನಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಅಜ್ಜಿಯ ಸ್ಪೀಡ್ ರಿಕವರಿ ನಮಗೂ ಖುಷಿ ಕೊಟ್ಟಿದೆ. ಆಕೆ ಚಿಕಿತ್ಸೆ ವೇಳೆ ತುಂಬಾ ಪಾಸಿಟಿವ್ ಆಗಿದ್ದರು ಎಂದು ವೈದ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *