ಬೆಂಗಳೂರು ಹೊರತು ಪಡಿಸಿ ಫೆ.22 ರಿಂದ ರಾಜ್ಯಾದ್ಯಂತ 6 ರಿಂದ 8ನೇ ತರಗತಿ ಆರಂಭ

– ಬೆಂಗಳೂರು, ಕೇರಳ ಗಡಿಯಲ್ಲಿ 8ನೇ ತರಗತಿ ಮಾತ್ರ ಓಪನ್
– ತರಗತಿಯಲ್ಲಿ ಹಾಜರಾತಿ ಕಡ್ಡಾಯವಲ್ಲ

ಬೆಂಗಳೂರು: ಬೆಂಗಳೂರು, ಕೇರಳ ಗಡಿಯಲ್ಲಿರುವ ಶಾಲೆಗಳನ್ನು ಹೊರತುಪಡಿಸಿ ಹೊರತುಪಡಿಸಿ ಫೆ.22 ರಿಂದ ರಾಜ್ಯಾದ್ಯಂತ 6 ರಿಂದ 8ನೇ ತರಗತಿಗಳು ತೆರೆಯಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಶಾಲೆ ಆರಂಭದ ಬಗ್ಗೆ ಇಂದು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, 6 ರಿಂದ 8ನೇ ತರಗತಿ ವಿದ್ಯಾಗಮ ಬದಲು ಪೂರ್ಣ ಪ್ರಮಾಣದ ಶಾಲೆಗಳನ್ನು ತೆರೆಯುತ್ತೇವೆ. ಶಾಲಾ ಪ್ರಾರಂಭದ ಬಗ್ಗೆ 5ನೇ ಸಭೆ ಇಂದು ನಡೆದಿದೆ. ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗದಲ್ಲಿ 6 ಮತ್ತು 7ನೇ ತರಗತಿಗಳು ಇರುವುದಿಲ್ಲ ಎಂದು ತಿಳಿಸಿದರು.

ಬೆಂಗಳೂರು ಮತ್ತು ಕೇರಳದಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿ ಇರುವ ಕಾರಣ ಕೇವಲ 8ನೇ ತರಗತಿ ತೆರೆಯಲು ಅನುಮತಿ ನೀಡಲಾಗಿದೆ. ಕೇರಳ ಭಾಗದಿಂದ ಬರುವ ವಿದ್ಯಾರ್ಥಿಗಳು ಕೊರೊನಾ ಟೆಸ್ಟ್ ರಿಪೋರ್ಟ್ ಮಾಡುವುದು ಕಡ್ಡಾಯ. ಈ ಬಾರಿಯೂ ಶಾಲೆಗಳಿಗೆ ಹಾಜರಾತಿ ಕಡ್ಡಾಯ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಹಾಸ್ಟೆಲ್ ಪ್ರಾರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಕ್ರಮವಹಿಸುತ್ತೇವೆ. ಸಾರಿಗೆ ಇಲಾಖೆಯಿಂದ ಸಹಕಾರ ಸಿಗಲಿದೆ. ವಿದ್ಯಾರ್ಥಿಗಳು ಇರೋ ಜಾಗದಲ್ಲಿ ಹೆಚ್ಚು ಟ್ರಿಪ್ ಮಾಡಲು ಮನವಿ ಮಾಡಲಾಗಿದೆ. ಎಲ್ಲಾ ಮಕ್ಕಳಿಗೂ ಕೊರೋನಾ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಕ್ರಮವಹಿಸುತ್ತದೆ ಎಂದು ತಿಳಿಸಿದರು.

ಶಾಲೆಗಳಲ್ಲಿ ಕೊರೋನಾ ನಿಯಮ ಪಾಲನೆ ಆಗುವ ಸಂಬಂಧ ನಾಳೆ ಡಿಸಿಗಳ ಜೊತೆ ಸಭೆ ಮಾಡುತ್ತೇವೆ. 24 ಅಥವಾ 25 ಮತ್ತೆ ತಜ್ಞರ ಸಮಿತಿ ಜೊತೆ ಸಭೆ ಮಾಡುತ್ತೇವೆ. 1-5 ನೇ ತರಗತಿ ವಿದ್ಯಾಗಮ ಪ್ರಾರಂಭ ಮಾಡುವ ಕುರಿತಾಗಿ ಸಭೆಯಲ್ಲಿ ಅಂತಿಮ ನಿರ್ಧಾರ ಮಾಡುತ್ತೇವೆ. ಸದ್ಯಕ್ಕೆ 1-5 ನೇ ತರಗತಿಗಳ ಪ್ರಾರಂಭ ಇಲ್ಲ ಮತ್ತು ವಿದ್ಯಾಗಮವೂ ಇಲ್ಲ ಎಂದರು.

ದೆಹಲಿ 9+ ಕೇರಳ 10+ ಒರಿಸ್ಸಾ 9+ ಹರಿಯಾಣ 6+ ಮಹಾರಾಷ್ಟ್ರ 5+ ಪಂಜಾಬ್ 1+ ತರಗತಿಗಳ ಪ್ರಾರಂಭ ಆಗಿದೆ ಅಂತ ತಜ್ಞರ ತಿಳಿಸಿದ್ದಾರೆ. ಕೇರಳದಿಂದ ಸೋಂಕು ಬರ್ತಿದೆ ಅಂತ ಮಾಹಿತಿ ಬಂದಿದೆ. ಕೇರಳಾ ಸೋಂಕಿನಿಂದ 2ನೇ ಅಲೆ ಬಗ್ಗೆ ಆತಂಕ ಬಂದಿದೆ ಎಂದು ಹೇಳಿದರು.

ಜನವರಿ 1ರಿಂದ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಪ್ರಾರಂಭವಾಗಿತ್ತು. ಫೆಬ್ರುವರಿ 1 ರಿಂದ 9ರಿಂದ 11ನೇ ತರಗತಿ ಪ್ರಾರಂಭ ಆಗಿತ್ತು. ನಾಲ್ಕು ತರಗತಿಗಳಲ್ಲೂ ಒಟ್ಟಾರೆ ಶೇ.70 ರಷ್ಟು ಹಾಜರಾತಿ ಇದೆ. ಯಾರಿಗೂ ತರಗತಿಗೆ ಬರುವಂತೆ ಕಡ್ಡಾಯ ಮಾಡಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ 1-8 ನೇ ತರಗತಿ ಪ್ರಾರಂಭಕ್ಕೆ ಬೇಡಿಕೆ ಬಂದಿದೆ. ಪೋಷಕರು, ಶಿಕ್ಷಣ ತಜ್ಞರು,ಎಸ್‍ಡಿಎಂಸಿ ಸದಸ್ಯರು ಕೇಳುತ್ತಿದ್ದಾರೆ. ಅಜೀಂ ಪ್ರೇಂ ಜೀ ಫೌಂಡೇಶನ್ ಒಂದು ಸರ್ವೆ ಮಾಡಿದೆ. ಶಾಲೆ ಪ್ರಾರಂಭ ಮಾಡದೇ ಮಕ್ಕಳ ಮೇಲೆ ಏನು ಪ್ರಭಾವ ಬೀರಿದೆ ಅಂತ ಸರ್ವೆಯಲ್ಲಿ ತಿಳಿದು ಬಂದಿದೆ. ಸಿಬಿಎಸ್‍ಸಿ ಕೂಡಾ ಏ.1ರಿಂದ ಶೈಕ್ಷಣಿಕ ವರ್ಷ ಪ್ರಾರಂಭ ಅಂತಾ ಘೋಷಣೆ ಮಾಡಿದೆ. ಹೀಗಾಗಿ ಉಳಿದ ತರಗತಿ ಬಗ್ಗೆ ತಜ್ಞರ ಜೊತೆ ಸಭೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *