ಬೆಂಗಳೂರು ಗಲಭೆ ರಾಜಕೀಯ ಲಾಭಕ್ಕಾಗಿ ನಡೆದಿರುವ ಘಟನೆ: ಲಕ್ಷ್ಮಣ ಸವದಿ

– ಬಿಜೆಪಿ‌ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜೆ.ಪಿ. ನಡ್ಡಾರಿಂದ ಶಿಲಾನ್ಯಾಸ

ರಾಯಚೂರು: ಬೆಂಗಳೂರಿನ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯ ಘಟನೆ ಪೂರ್ವ ನಿಯೋಜಿತ, ಇದು ರಾಜಕೀಯ ಲಾಭಕ್ಕಾಗಿ ನಡೆದಿರುವ ಘಟನೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಯಚೂರಿನಲ್ಲಿ ಹೇಳಿದ್ದಾರೆ.

ನಗರದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಬೆಂಗಳೂರು ಗಲಭೆಗೆ ಕಾರಣವಾದ ನವೀನ್ ಅನ್ನೋ ವ್ಯಕ್ತಿ ಕಟ್ಟಾ ಕಾಂಗ್ರೆಸ್ ಬೆಂಬಲಿಗ. ನವೀನ್‍ಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದರು.

ಡಿ.ಕೆ.ಶಿವಕುಮಾರ್ ಹಾಗೂ ಅವರ ಮಾವನವರ ಕುರಿತಾದ ಪೋಸ್ಟ್ ಗಳನ್ನು ನವೀನ್ ಹಾಕಿದ್ದು ಎಲ್ಲರಿಗೂ ಗೊತ್ತಿದೆ. ಯಾರೇ ಏನೇ ಹೇಳಿದರೂ ನವೀನ್ ಕಾಂಗ್ರೆಸ್ ಕಾರ್ಯಕರ್ತ ಎನ್ನುವುದು ಜಗಜ್ಜಾಹೀರಾಗಿದೆ. ಅದಕ್ಕೆ ಎಲ್ಲ ಸಾಕ್ಷಿ ಪುರಾವೆಗಳಿವೆ. ಘಟನೆಯಲ್ಲಿ ಭಾಗಿಯಾದವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿದೆ. ರಾಜಕೀಯ ಲಾಭಕ್ಕೆ ಮಾಡಿಕೊಂಡಿರುವ ಸಂಘಟನೆಯನ್ನು ಮಟ್ಟಹಾಕಬೇಕಾಗಿದೆ ಎಂದು ಸವದಿಯವರು ತಿಳಿಸಿದರು.

ಕಾನೂನು ಚೌಕಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನ ಸರ್ಕಾರ ತೆಗೆದುಕೊಂಡಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಆಸ್ತಿ ಮುಟ್ಟುಗೋಲಿಗೆ ಮುಲಾಜಿಲ್ಲದ ಕ್ರಮಕ್ಕೆ ಚಿಂತನೆ ನಡೆದಿದೆ. ಈ ಬಗ್ಗೆ ಗೃಹ ಸಚಿವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಅಂತ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ನೂತನ ಬಿಜೆಪಿ ಜಿಲ್ಲಾ ಕಚೇರಿ ಕಟ್ಟಡ ನಿರ್ಮಾಣ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಶಿಲಾನ್ಯಾಸಕ್ಕೆ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಬಿಜೆಪಿ ಸ್ವಂತ ಕಚೇರಿಗಳನ್ನ ತೆರೆಯಬೇಕು ಅನ್ನೋ ಇಂಗಿತ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *