ಬೆಂಗಳೂರಿನ ಪ್ರತಿಷ್ಠಿತ ಕರಗ ಮೆರವಣಿಗೆಗೆ ಅವಕಾಶ ಇಲ್ಲ- ಈ ಬಾರಿಯೂ ಸರಳ ಆಚರಣೆ

– ದೇವಸ್ಥಾನದಲ್ಲಿ ಪೂಜೆಗೆ ಮಾತ್ರ ಅವಕಾಶ
– ಉತ್ಸವ ಸಮಿತಿ ರಚನೆ ಬಳಿಕ ರೂಪುರೇಷೆ

ಬೆಂಗಳೂರು: ನಗರದ ಪ್ರತಿಷ್ಠಿತ ಆಚರಣೆಯಾದ ಕರಗ ಉತ್ಸವಕ್ಕೆ ಈ ಬಾರಿಯೂ ಕೋವಿಡ್ ಮಹಾಮಾರಿ ಅಡ್ಡಿಯಾಗಿದ್ದು, ಕೋವಿಡ್ ನಿಯಮದ ಅನುಸಾರ ದೇವಸ್ಥಾನದ ಒಳಗೆ ಮಾತ್ರ ಆಚರಣೆಗೆ ಅವಕಾಶ ನೀಡುವ ಬಗ್ಗೆ ಇಂದು ಬಿಬಿಎಂಪಿಯಲ್ಲಿ ಸಭೆ ನಡೆಸಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಶಾಸಕರಾದ ಉದಯ್ ಗರುಡಾಚಾರ್, ಪಿ.ಆರ್.ರಮೇಶ್ ಹಾಗೂ ದೇವಸ್ಥಾನದ ಮುಖ್ಯಸ್ಥರು, ಪೊಲೀಸರು, ವಿಶೇಷ ಆಯುಕ್ತರು, ಜಂಟಿ ಆಯುಕ್ತರು ಸಭೆಯಲ್ಲಿ ಭಾಗಿಯಾಗಿದ್ದರು.

ಸದ್ಯ ಕರಗ ಉತ್ಸವಕ್ಕೆ ವ್ಯವಸ್ಥಾಪನಾ ಸಮಿತಿ ಇಲ್ಲ. ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರನ್ನು ಆಡಳಿತ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆದರೆ ಉತ್ಸವ ಸಮಿತಿ ರಚನೆ ಮಾಡಬೇಕಿದೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ಕೊಡಲಾಗಿದೆ. ಉತ್ಸವ ಯಾವ ರೀತಿ ನಡೆಯಬೇಕೆಂಬ ಪರಿಕಲ್ಪನೆಯನ್ನು ಉತ್ಸವ ಸಮಿತಿ ಮಾಡಲಿದೆ. ವಾರದೊಳಗೆ ಮತ್ತೆ ಸಭೆ ನಡೆಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ತಿಳಿಸಿದರು. ಕಳೆದ ವರ್ಷವೂ ಕಾರಣಾಂತರದಿಂದ ಮೆರವಣಿಗೆ ಮಾಡಲು ಆಗಿರಲಿಲ್ಲ. ದೇವಸ್ಥಾನದೊಳಗೇ ಪೂಜೆ ನಡೆಸಲಾಗಿತ್ತು. ಇದೀಗ ಈ ವರ್ಷವೂ ಸರಳವಾಗಿ ಕರಗ ಆಚರಿಸಲಾಗುತ್ತಿದೆ.

ಏಪ್ರಿಲ್ 19 ರಿಂದ 27 ರವರೆಗೆ ನಡೆಯಲಿದೆ. ಕೋವಿಡ್ ಎರಡನೇ ಅಲೆ ಇರುವುದರಿಂದ, ಪರಿಸ್ಥಿತಿ ನೋಡಿಕೊಂಡು ಆವರಣೆಗೆ ಅನುಮತಿ ಸಿಗಲಿದೆ. ಸದ್ಯದ ಸರ್ಕಾರದ ಆದೇಶದ ಪ್ರಕಾರ ಜಾತ್ರೆ, ಮೆರವಣಿಗೆ ನಡೆಸಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದರು.

ಮುಜರಾಯಿ ಇಲಾಖೆಯ ಬಿ ಕೆಟಗೆರಿಯಲ್ಲಿ ಈ ದೇವಸ್ಥಾನ ಬರುತ್ತದೆ. ಕಳೆದ ವರ್ಷ ಪೂಜೆಗೆ ಸೀಮಿತ ಮಾಡಿ ಮೆರವಣಿಗೆ ರದ್ದು ಮಾಡಲಾಗಿತ್ತು. ದೇವಸ್ಥಾನ ಒಳಗೆ ಪೂಜೆ ಮಾಡಲು ಮಾತ್ರ ಅವಕಾಶ ಇದೆ. ಸಮುದಾಯಕ್ಕೆ ಸೇರಿದ ಮುಖಂಡರನ್ನೊಳಗೊಂಡ ಉತ್ಸವ ಸಮಿತಿ ರಚನೆ ಮಾಡಲಾಗುತ್ತದೆ. ಸಾರ್ವಜನಿಕರು ಸೇರುವಹಾಗಿಲ್ಲ. ಸಾಮೂಹಿಕವಾಗಿ ಜನರ ಗುಂಪುಗೂಡುವಿಕೆಗೆ ಅವಕಾಶವಿಲ್ಲ. ಕರಗಕ್ಕೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದರೂ, ಕೋವಿಡ್ ಹಿನ್ನಲೆ ಮೆರವಣಿಗೆ ರದ್ದಾಗಿದೆ ಎಂದರು.

Comments

Leave a Reply

Your email address will not be published. Required fields are marked *