ಬೆಂಗಳೂರಿನಿಂದ ಹಳ್ಳಿವರೆಗೆ ಮಾಸ್ಕ್ ಕಡ್ಡಾಯ- ಕಾರ್ಯಕ್ರಮಗಳಿಗೆ ಎಷ್ಟು ಜನ ಭಾಗವಹಿಸಬಹುದು?

– ಪೊಲೀಸರಿಗೂ ಮಾಸ್ಕ್ ದಂಡ ಹಾಕುವ ಅವಕಾಶ
– ಗ್ರಾಮಗಳಲ್ಲಿ ಪಿಡಿಒಗಳಿಗೆ ಪವರ್

ಬೆಂಗಳೂರು: ಸತತ ಎರಡನೇ ದಿನ ಕೊರೊನಾ ಪ್ರಕರಣಗಳು 2 ಸಾವಿರಕ್ಕಿಂತ ಹೆಚ್ಚು ದಾಖಲಾಗುತ್ತಿದ್ದಂತೆ ಸರ್ಕಾರ ಕಠಿಣ ಕ್ರಮ ಜಾರಿ ಮಾಡಿದೆ. ಇದೀಗ ಮಾಸ್ಕ್, ಸಾಮಾಜಿಕ ಅಂತರ ಪಾಲನೆಗೆ ಒತ್ತು ನೀಡಲಾಗಿದ್ದು, ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದವರಿಗೆ 250 ರೂ. ದಂಡ ವಿಧಿಸಲಾಗಿದ್ದು, ಪಾಲಿಕೆ ವ್ಯಾಪ್ತಿ ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸುವಂತೆ ಸರ್ಕಾರ ಸೂಚಿಸಿದೆ. ಅಲ್ಲದೆ ಪೊಲೀಸರಿಗೂ ಮಾಸ್ಕ್ ಗೆ ದಂಡ ಹಾಕುವ ಪವರ್ ನೀಡಲಾಗಿದ್ದು, ಕಾನ್‍ಸ್ಟೇಬಲ್ ದಂಡ ವಿಧಿಸುವಂತಿಲ್ಲ, ಹೆಡ್ ಕಾನ್‍ಸ್ಟೇಬಲ್ ದಂಡ ವಿಧಿಸಬಹುದಾಗಿದೆ.

ಸಾಮಾಜಿಕ ಅಂತರ ಪಾಲನೆ ಮಾಡದಿದ್ದರೂ ದಂಡ ವಿಧಿಸಲಾಗುತ್ತಿದ್ದು, 250 ರೂ. ದಂಡ ನಿಗದಿಪಡಿಸಲಾಗಿದೆ. ಮದುವೆ ಹಾಲ್, ಸಭೆ, ಸಮಾರಂಭಗಳಲ್ಲಿ ಸೀಮಿತ ಜನರನ್ನು ಹೊರತುಪಡಿಸಿ ಹೆಚ್ಚು ಜನ ಇದ್ದರೆ, ಮಾಸ್ಕ್ ಧರಿಸದೇ ಇದ್ದರೆ ಅಂತಹ ಪಾರ್ಟಿ ಹಾಲ್‍ಗಳಿಗೆ 5 ಸಾವಿರ ರೂ., ಏಸಿ ಹಾಲ್ ಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಸ್ಟಾರ್ ಹೋಟೆಲ್‍ಗಳಲ್ಲಿ ಹೆಚ್ಚು ಜನ ಸೇರಿಸಿ ಕಾರ್ಯಕ್ರಮ ನಡೆಸಿದರೆ 10 ಸಾವಿರ ದಂಡ ವಿಧಿಸುವ ಕುರಿತು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಎಷ್ಟು ಜನ ಸೇರಬಹುದು?
ವಿವಾಹ ಸೇರಿದಂತೆ ಇತರೆ ಸಭೆ ಸಮಾರಂಭಗಳಿಗೆ ಒಳಾಂಗಣ ಸಭಾಂಗಣದಲ್ಲಿ 200 ಜನ, ಹೊರಾಂಗಣದಲ್ಲಿ 500 ಜನ ಸೇರಲು ಅನುಮತಿ ನೀಡಲಾಗಿದೆ. ಹುಟ್ಟುಹಬ್ಬದ ಸಮಾರಂಭಗಳಿಗೆ ಹೊರಾಂಗಣದಲ್ಲಿ 100 ಹಾಗೂ ಒಳಾಂಗಣ ಸಭಾಂಗಣದಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದಕ್ಕೂ ಹೆಚ್ಚು ಜನ ಸೇರಿದರೆ ಮುಲಾಜಿಲ್ಲದೆ ದಂಡ ವಿಧಿಸಬಹುದು.

ಯಾರ್ಯಾರು ದಂಡ ವಿಧಿಸಬಹುದು?
ಗ್ರಾಮೀಣ ಭಾಗಗಳಲ್ಲಿ ಪಂಚಾಯಿತಿಗಳಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗಿದ್ದು, ಪಿಡಿಓ, ಗ್ರಾಮ ಪಂಚಾಯಿತಿ ಸೆಕ್ರೆಟರಿಗಳು ಸಹ ದಂಡ ವಿಧಿಸಬಹುದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಷಲ್‍ಗಳು, ಹೆಡ್ ಕಾನ್‍ಸ್ಟೇಬಲ್ ಮೇಲ್ಪಟ್ಟ ಪೊಲೀಸರು, ಹೆಲ್ತ್ ಇನ್‍ಸ್ಪೆಕ್ಟರ್ ಗಳಿಗೆ ದಂಡ ವಿಧಿಸುವ ಅಧಿಕಾರವನ್ನು ನೀಡಲಾಗಿದೆ.

Comments

Leave a Reply

Your email address will not be published. Required fields are marked *