ಬೆಂಗಳೂರಿನಿಂದ ಬಂದಿದ್ದ 7 ಮಂದಿಗೆ ಕೊರೊನಾ- ಹಾಸನದಲ್ಲಿ ಇಂದು 25 ಜನರಿಗೆ ಸೋಂಕು

ಹಾಸನ: ಬೆಂಗಳೂರು ಟ್ರಾವೆಲ್ ಹಿಸ್ಟರಿ ಹೊಂದಿರುವ ಏಳು ಜನ ಸೇರಿದಂತೆ ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ 25 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಹಾಸನದಲ್ಲಿ ಬೆಂಗಳೂರು ಟ್ರಾವೆಲ್ ಹಿಸ್ಟರಿ ಹೊಂದಿರುವುದರಿಂದ ಸೋಂಕು ಹೆಚ್ಚಳ ಆಗುತ್ತಿದೆಯಾ ಎಂಬ ಅನುಮಾನ ಮೂಡುವಂತಾಗಿದೆ.

ಇಂದಿನ 25 ಹೊಸ ಪ್ರಕರಣ ಸೇರಿ ಹಾಸನದಲ್ಲಿ ಸೋಂಕಿತರ ಸಂಖ್ಯೆ 740ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ. ಇದುವರೆಗೆ 486 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 232 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 22 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದರು.

ಹೊಸದಾಗಿ ಇಂದು ಪತ್ತೆಯಾದ 25 ಪ್ರಕರಣಗಳಲ್ಲಿ 20 ಜನ ಹಾಸನ ತಾಲೂಕಿಗೆ ಸೇರಿದವರಾಗಿದ್ದಾರೆ. ಒಬ್ಬರು ಅರಸೀಕೆರೆ, ಒಬ್ಬರು ಬೇಲೂರು, 3 ಜನ ಸಕಲೇಶಪುರ ತಾಲೂಕಿಗೆ ಸೇರಿದವರಾಗಿದ್ದಾರೆ. ಕೋವಿಡ್-19 ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಡಾ. ಸತೀಶ್ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *