ಬೆಂಗಳೂರಿನಲ್ಲಿ ಮೊಳಗಿದ ಕುರುಬರ ಎಸ್ಟಿ ಹೋರಾಟದ ಕಿಚ್ಚು

– ಕಾರ್ಯಕ್ರಮಕ್ಕೆ ಗೈರಾಗಿ ಆಕ್ರೋಶಕ್ಕೆ ಗುರಿಯಾದ ಸಿದ್ದರಾಮಯ್ಯ

ಬೆಂಗಳೂರು: ಎಸ್ಟಿ ಮೀಸಲಾತಿಗೆ ಆಗ್ರಹಿಸಿ ನಡೆದ ಕುರುಬ ಸಮುದಾಯದ ಸಮಾವೇಶದ ಕಿಚ್ಚು ರಾಜ್ಯ ರಾಜಧಾನಿಯಲ್ಲಿ ಇಂದು ರಂಗೇರಿತ್ತು. ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಹಾಲುಮತದ ಬಾಂಧವರು ಭಾಗಿಯಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಿದರು.

ಮಾದವಾರ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ನಡೆದ ಬೃಹತ್ ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿ ಎಸ್ಟಿ ಮೀಸಲಾತಿ ಕೊಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದರು. ಕನಕ ಪೀಠದ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಸಮಾವೇಶ ನಡೆಯಿತು.

ಸಮಾವೇಶದಲ್ಲಿ ಮಾತನಾಡಿದ ಎಚ್. ವಿಶ್ವನಾಥ್ ಎಸ್ಟಿ ಮೀಸಲಾತಿ ಕೊಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ಕೊಟ್ಟು, ಸಮಾವೇಶಕ್ಕೆ ಆಗಮಿಸದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದರು.

ಸಚಿವ ಈಶ್ವರಪ್ಪ ಮಾತನಾಡಿ ಮೋದಿ, ಅಮಿತ್ ಶಾ ಅವರೊಂದಿಗೆ ಚರ್ಚಿಸಿ ಮೀಸಲಾತಿ ಮಾಡಿಸಿಕೊಂಡು ಬರುವುದಾಗಿ ಸಮಾವೇಶದಲ್ಲಿ ಭರವಸೆ ಕೊಟ್ಟರು. ಅಲ್ಲದೆ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಂತರ ಮಾತನಾಡಿದ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಯಡಿಯೂರಪ್ಪ ಹಾಗೂ ಕೇಂದ್ರ ಸರ್ಕಾರಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಮನವಿ ಮಾಡಿಕೊಂಡು, ಯಡಿಯೂರಪ್ಪ ಅವರು ಕೂಡಲೇ ಕುಲ ಅಧ್ಯಯನ ಶಾಸ್ತ್ರ ಮಾಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಬಳಿಕ ನಾವು ಮೋದಿ, ಅಮಿತ್ ಶಾ ಬಳಿ ನಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ. ಎಲ್ಲಾ ಸ್ವಾಮೀಜಿಗಳ ತರಹ ಬ್ಲ್ಯಾಕ್ ಮೇಲ್ ಮಾಡುವುದಿಲ್ಲ. ನಾವು ಸಾಯೋವರೆಗೂ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ. ಮೋದಿ ಅವರು ಮೀಸಲಾತಿ ಕೊಟ್ಟರೆ 60 ಲಕ್ಷ ಕುರುಬರು ಮೋದಿ ಜೊತೆ ಇರುತ್ತೇವೆ ಎಂದು ಘೋಷಣೆ ಮಾಡಿದರು.

Comments

Leave a Reply

Your email address will not be published. Required fields are marked *