ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್ ಸೋಂಕು – ಏನಿದು ಸೋಂಕು? ಲಕ್ಷಣ ಏನು? ಗಂಭೀರ ಯಾಕೆ?

ಬೆಂಗಳೂರು: ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕೊರೊನಾದಿಂದ ಗುಣಮುಖರಾದವರಲ್ಲಿ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದೆ.

ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡವರಲ್ಲಿ ಇದೀಗ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಮೊದಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಈ ಶೀಲಿಂಧ್ರ ಸೋಂಕು ಇದೀಗ ಬೆಂಗಳೂರಿನಲ್ಲೂ ಕಾಣಿಸಿಕೊಳ್ಳುವ ಮೂಲಕ ಭೀತಿ ಹುಟ್ಟಿಸಿದೆ.

ಏನಿದು ಬ್ಲಾಕ್ ಫಂಗಸ್ ಸೋಂಕು?
ಕೊರೊನಾದಿಂದ ಚೇತರಿಸಿಕೊಂಡವರಲ್ಲಿ 2 ಅಥವಾ 3 ವಾರಗಳ ಬಳಿಕ ಕಾಣಿಸಿಕೊಲ್ಲುವ ಶೀಲಿಂಧ್ರ ಸೋಂಕನ್ನು ಬ್ಲಾಕ್ ಫಂಗಸ್ ಎಂದು ಕರೆಯಲಾಗುತ್ತದೆ. ಇದು ರೋಗನಿರೋಧಕ ಶಕ್ತಿ ಕಡಿಮೆ ಇದ್ದವರು ಮತ್ತು ಡಯಾಬಿಟಿಸ್ ಉಳ್ಳವರಲ್ಲಿ ಬೇಗ ಕಾಣಿಸಿಕೊಳ್ಳುತ್ತಿದೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರ ಕಣ್ಣಿನಲ್ಲಿ ನೋವು, ಒಂದು ಕಡೆ ಮುಖ ಊದಿಕೊಳ್ಳುವಿಕೆ, ತಲೆ ನೋವು, ಜ್ವರ, ಮೂಗು ಕಟ್ಟುವುದು ಕಂಡು ಬಂದರೆ ಅದು ಬ್ಲಾಕ್ ಫಂಗಸ್ ಸೋಂಕಿನ ಲಕ್ಷಣವಾಗಿರುತ್ತದೆ. ಕೋವಿಡ್‍ಗೆ ಸ್ಟಿರಾಯ್ಡ್ ತೆಗೆದುಕೊಂಡವರು ಮತ್ತು ಬಹು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಸೋಂಕು ಕಂಟಕವಾಗುತ್ತಿದೆ.

ಬ್ಲಾಕ್ ಫಂಗಸ್ ಸೋಂಕಿನ ಲಕ್ಷಣಗಳೇನು?
* ಕಣ್ಣು ನೋವು, ಊತ, ಮಸುಕಾಗುವುದು
* ಮೂಗಿನ ಸುತ್ತ ಕಪ್ಪಾಗುವುದು
* ಕೆನ್ನೆಯ ಮೂಳೆಯಲ್ಲಿ ನೋವು
* ಮರಗಟ್ಟುವಿಕೆಯ ಅನುಭವ
* ಹಲ್ಲುಗಳು ಸಡಿಲಗೊಳ್ಳುವುದು
* ಎದೆ ನೋವು, ಚರ್ಮ ಹಾನಿ
* ಶ್ವಾಸಕೋಶದಲ್ಲಿ ನೀರು ಸೇರಿಕೊಳ್ಳುವುದು
* ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುವುದು

ಗಂಭೀರ ಯಾಕೆ?
ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲೇ ಈ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದ್ದು, ಬ್ಲಾಕ್ ಫಂಗಲ್ ಎಂದು ಕರೆಯಲ್ಪಡುವ ಮ್ಯೂಕೋರ್‍ಮೈಕೋಸಿಸ್ ಬಾಧೆಯಿಂದ ಕೆಲವರ ಕಣ್ಣಿಗೆ ಹಾನಿ ಭೀತಿ ಕಾಡುತ್ತಿದೆ. ಈ ಫಂಗಸ್ ಮೆದುಳಿಗೆ ವ್ಯಾಪಿಸಿದರೆ ಸಾವನ್ನಪ್ಪುವ ಸಾಧ್ಯತೆಯು ಹೆಚ್ಚಿದೆ. ಬೆಂಗಳೂರು ಜೊತೆಗೆ ಗುಜರಾತ್‍ನ ಸೂರತ್, ಗಾಂಧಿನಗರ ಮತ್ತು ದೆಹಲಿ, ಮಹಾರಾಷ್ಟ್ರದಲ್ಲೂ ಬ್ಲಾಕ್ ಫಂಗಸ್ ಜನರ ನಿದ್ದೆ ಕೆಡಿಸುತ್ತಿದೆ.

Comments

Leave a Reply

Your email address will not be published. Required fields are marked *