ಬೆಂಗಳೂರಿನಲ್ಲಿ ಇಂದು, ನಾಳೆ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ನಿವಾರ್ ಚಂಡಮಾರುತ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಂಭವವಿದೆ.

ಕೊರೊನಾ ಮಧ್ಯೆ ದಕ್ಷಿಣ ಕರ್ನಾಟಕಕ್ಕೆ ಚಂಡಮಾರುತ ಅಪ್ಪಳಿಸಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಿವಾರ್ ಸೈಕ್ಲೋನ್ ಎಫೆಕ್ಟ್ ತಟ್ಟುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ. ಅತ್ತ ತಮಿಳುನಾಡಿನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ನಿವಾರ್ ಚಂಡಮಾರುತ ಈಗಾಗಲೇ ತಮಿಳುನಾಡು-ಪುದುಚೇರಿ ಕಡಲ ತೀರಕ್ಕೆ ಬಂದಪ್ಪಳಿಸಿದೆ. ಇಂದು ಸಂಜೆ ವೇಳೆಗೆ ನಿವಾರ್ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ. ಪುದುಚೇರಿಯಿಂದ ಪೂರ್ವ ಆಗ್ನೇಯ ದಿಕ್ಕಿನ 410 ಕಿಲೊಮೀಟರ್ ದೂರದಲ್ಲಿ, ಚೆನ್ನೈಗೆ ದಕ್ಷಿಣ ಆಗ್ನೇಯ ದಿಕ್ಕಿನ 450 ಕಿಲೊಮೀಟರ್ ದೂರದಲ್ಲಿ ನಿವಾರ್ ಕೇಂದ್ರೀಕೃತವಾಗಿದ್ದು, ಶರವೇಗದಲ್ಲಿ ಮುನ್ನುಗ್ಗಿ ಬರುತ್ತಿದೆ.

ಸಂಜೆ ವೇಳೆಗೆ 120 ಕಿಲೋಮೀಟರ್ ವೇಗದಲ್ಲಿ ನಿವಾರ್ ಅಪ್ಪಳಿಸುವ ಮುನ್ಸೂಚನೆ ಇದೆ. ಮುಂದಿನ 6 ಗಂಟೆಗಳಲ್ಲಿ ನಿವಾರ್ ಅಬ್ಬರ ಗೊತ್ತಾಗಲಿದೆ. ಮುಂಜಾಗ್ರತಾ ಕ್ರಮವಾಗಿ 1,200 ಮಂದಿಯ ಎನ್‍ಡಿಆರ್‍ಎಫ್ ತಂಡವನ್ನು ನಿಯೋಜಿಸಲಾಗಿದೆ. ಜೊತೆಗೆ ಪ್ರಧಾನಿ ಮೋದಿ ಕೂಡ ನೆರವಿನ ಭರವಸೆ ನೀಡಿದ್ದಾರೆ. ಅಲ್ಲದೇ ನಿವಾರ್ ಹಾವಳಿಯಿಂದಾಗುವ ಅನಾಹುತ ತಪ್ಪಿಸಲು ಇಂದು ತಮಿಳುನಾಡಿನಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ಪ್ರಮುಖ ಬಂದರುಗಳನ್ನು ಬಂದ್ ಮಾಡಲಾಗಿದೆ.

ಇನ್ನು ಕರ್ನಾಟಕ, ಆಂಧ್ರ, ತೆಲಂಗಾಣದ ಮೇಲೆಯೂ ನಿವಾರ್ ಪರಿಣಾಮ ಬೀರಲಿದೆ. ಇಂದಿನಿಂದ ನವೆಂಬರ್ 27ರವರೆಗೆ ರಾಜ್ಯದ ಹಲವೆಡೆ ಮಳೆ ಆಗಲಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಚಾಮರಾಜನಗರದಲ್ಲಿ ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನೆರೆ ರಾಜ್ಯದ ಮೇಲೆ ನಿವಾರ್ ಸವಾರಿಯ ಪರಿಣಾಮ ಬೆಂಗಳೂರಿನಲ್ಲೂ ಇವತ್ತು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ತಗ್ಗು ಪ್ರದೇಶಗಳ ನಿವಾಸಿಗಳು ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಸೂಚಿಸಲಾಗಿದೆ.

Comments

Leave a Reply

Your email address will not be published. Required fields are marked *