ಬೆಂಗಳೂರಿಗೆ ಬರೋ ವ್ಯಕ್ತಿಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ?

ಬೆಂಗಳೂರು: ಲಾಕ್‍ಡೌನ್ ಮುಗಿದ ಬಳಿಕ ಬೆಂಗಳೂರಿಗೆ ಬರುವ ವ್ಯಕ್ತಿಗಳಿಗೆ ಸರ್ಕಾರ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡುತ್ತಾ ಎಂಬ ಪ್ರಶ್ನೆ ಈಗ ಎದ್ದಿದೆ.

ಹೌದು. ಸದ್ಯ ಈಗ ಜೂನ್ 7ರವರೆಗೆ ಲಾಕ್‍ಡೌನ್ ಮುಂದುವರಿಯಲಿದ್ದು, ನಂತರ ಏನು ಎನ್ನುವುದು ತಿಳಿದು ಬಂದಿಲ್ಲ. ಲಾಕ್‍ಡೌನ್ ತೆರವಾದ ಕೂಡಲೇ ಮತ್ತೆ ಊರಿನಿಂದ ಬೆಂಗಳೂರಿಗೆ ವಲಸೆ ಆರಂಭವಾಗಲಿದೆ. ಲಾಕ್‍ಡೌನ್ ಹೇರಿದ ಬಳಿಕವೂ ಕೊರೊನಾ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಜೂನ್ 7ರ ಬಳಿಕ ಬೆಂಗಳೂರಿಗೆ ಬರುವ ವ್ಯಕ್ತಿಗಳಿಗೆ ಕೊರೊನಾ ಟೆಸ್ಟ್ ಕಡ್ಡಾಯ ಮಾಡಿ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

 

ತಜ್ಞರು ಈ ಸಲಹೆ ನೀಡಲು ಕಾರಣವಿದೆ. ಆರಂಭದಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಲಾಕ್‍ಡೌನ್ ಘೋಷಣೆಯಾದ ಬಳಿಕ ಬೆಂಗಳೂರಿನ ಜನ ಜಿಲ್ಲೆಗಳಿಗೆ ವಲಸೆ ಹೋಗಿದ್ದಾರೆ. ಕಠಿಣ ಲಾಕ್‍ಡೌನ್ ನಿಯಮ ಜಾರಿಯಾಗಿದ್ದರಿಂದ ಬೆಂಗಳೂರಿನಲ್ಲಿ ಸೋಂಕು ಕಡಿಮೆಯಾಗುತ್ತಿದ್ದರೆ ಗ್ರಾಮೀಣ ಭಾಗದಲ್ಲಿ ಸೋಂಕು ಏರುತ್ತಿದೆ.

ಒಂದು ವೇಳೆ ಲಾಕ್‍ಡೌನ್ ತೆರವಾದ ಕೂಡಲೇ ಊರಿನಿಂದ ಬೆಂಗಳೂರಿಗೆ ವಲಸೆ ಆರಂಭಗೊಳ್ಳುತ್ತದೆ. ಜನರ ಓಡಾಟದಿಂದ ಮತ್ತೆ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಜಾಸ್ತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಈ ರೀತಿ ಆಗದಂತೆ ತಡೆಯಲು ಬೆಂಗಳೂರಿಗೆ ಬರುವ ವ್ಯಕ್ತಿಗಳಿಗೆ ಆರಂಭದಲ್ಲೇ ಕೊರೊನಾ ಪರೀಕ್ಷೆ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಒಂದು ವೇಳೆ ಜೂನ್ 7ವರೆಗೆ ಲಾಕ್‍ಡೌನ್ ಹೇರಿಯೂ ಕೊರೊನಾ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಈ ಸಲಹೆಯನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸುವ ಸಾಧ್ಯತೆಯಿದೆ. ಈಗಾಗಲೇ ಕೆಲ ರಾಜ್ಯಗಳು ಬೇರೆ ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದೆ. ಹೀಗಾಗಿ ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದೇ ಬೆಂಗಳೂರಿಗೆ ಬರುವಂತಿಲ್ಲ ಎಂದು ನಿಯಮ ಮಾಡಿದರೆ ತಪ್ಪೇನಿಲ್ಲ. ಇದರಿಂದಾಗಿ ಏಕಾಏಕಿ ಬೆಂಗಳೂರಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗಬಹುದು. ಕೊರೊನಾ ನಿಯಂತ್ರಣಕ್ಕೆ ಬರಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ಭಾರತದಲ್ಲಿ ಕೊರೊನಾ ಎರಡನೇ ಅಲೆ ಜಾಸ್ತಿಯಾಗಲು ವಲಸೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಕಾರಣ ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ. ಹೀಗಾಗಿ ಬೆಂಗಳೂರಿಗೆ ಬರುವವರಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯ ಆಗುತ್ತಾ? ಜೂನ್ 7ಕ್ಕೆ ಲಾಕ್‍ಡೌನ್ ಮುಗಿದ ಬಳಿಕ ಸರ್ಕಾರ ಹೊಸ ನಿಯಮ ಜಾರಿ ಮಾಡುತ್ತಾ ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Comments

Leave a Reply

Your email address will not be published. Required fields are marked *