ಬೆಂಗಳೂರಿಗೆ ಏಳು ದಿನ ಬೀಗ – ರಾಜಧಾನಿ ಸಂಪರ್ಕಿಸುವ ರಸ್ತೆ ಬಂದ್

ಬೆಂಗಳೂರು: ಕೊರೊನಾ ತಡೆಗಾಗಿ ಬೆಂಗಳೂರಿಗೆ ಸರ್ಕಾರ ಏಳು ದಿನ ಬೀಗ ಹಾಕಿದೆ. ರಾತ್ರಿ 8 ಗಂಟೆಯಿಂದಲೇ ಬೆಂಗಳೂರಿನಲ್ಲಿ ಲಾಕ್‍ಡೌನ್ ಆರಂಭಗೊಂಡಿದ್ದರೂ ವಲಸೆ ಹೋಗುತ್ತಿರೋ ಜನರ ಸಂಖ್ಯೆ ಕಡಿಮೆ ಆಗ್ತಿಲ್ಲ. ಕೊರೊನಾ ಭೀತಿಯಿಂದಾಗಿ ಕಳೆದ 10 ದಿನಗಳಲ್ಲಿ ಸುಮಾರು ಎಂಟು ಲಕ್ಷ ಜನರು ಮಹಾನಗರಿ ಬೆಂಗಳೂರಿಗೆ ವಿದಾಯ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಅನವಶ್ಯಕವಾಗಿ ಮನೆಯಿಂದ ಹೊರಗೆ ಬರುವಂತಿಲ್ಲ. ರಾತ್ರಿ ಎಂಟು ಗಂಟೆಯಿಂದ ನಗರದಲ್ಲಿ 144 ಸೆಕ್ಷನ್ ಜಾರಿಯಾಗಲಿದೆ. ಸಾರಿಗೆ ಬಸ್ ಸೇರಿದಂತೆ ಯಾವುದೇ ಖಾಸಗಿ ವಾಹನಗಳ ಸಂಚಾರ ಇರಲ್ಲ. ನಗರದ ಎಲ್ಲ ಫ್ಲೈಓವರ್ ಬಂದ್ ಮಾಡಲಾಗುತ್ತಿದೆ. ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ದಿನಸಿ, ತರಕಾರಿ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಯಾರು ಬೇಕಾದ್ರೂ ಬೆಂಗಳೂರಿನಿಂದ ಹೊರಗಡೆ ಹೋಗಬಹುದು. ಆದ್ರೆ ಬರುವಾಗ ಸೇವಾಸಿಂದುವಿನಡಿಯಲ್ಲಿ ಬರಬೇಕು. ಇನ್ನು ವಿಮಾನ ನಿಲ್ದಾಣಕ್ಕೆ ಹೋಗುವರರು ಕಡ್ಡಾಯವಾಗಿ ತಮ್ಮ ಟಿಕೆಟ್ ತೆಗೆದುಕೊಂಡು ಹೋಗಬೇಕು. ಚೆಕ್‍ಪೋಸ್ಟ್ ಗಳಲ್ಲಿ ವಿಮಾನ ಪ್ರಯಾಣದ ಟಿಕೆಟ್ ನ್ನು ಪಾಸ್ ನಂತೆ ಪರಿಗಣಿಸಲಾಗುವುದು. ತುರ್ತುಸೇವೆಗಳಿಗೆ ಅನುಮತಿ ನೀಡಲಾಗಿದ್ದು, ಅನಗತ್ಯ ಸಂಚಾರ ಕಂಡು ಬಂದ್ರೆ ಲಾಠಿ ಬಳಸಬೇಕಾಗುತ್ತದೆ ಎಂದು ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *