ಬೆಂಗಳೂರಲ್ಲಿ ಲಾಕ್‍ಡೌನ್ ಮಾಡಿ – ತಜ್ಞರ ಜೊತೆ ತುರ್ತು ಸಭೆಯಲ್ಲಿ ಏನಾಯ್ತು? ಆತಂಕ ಏನು? ಸಲಹೆ ಏನು?

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಲಾಕ್‍ಡೌನ್ ಜಾರಿಯಾಗುತ್ತಾ? ಈಗ ಈ ಮಾತು ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಎರಡನೇ ಅಲೆಯಾಗಿ ಕಾಡುತ್ತಿರುವ ಹೆಮ್ಮಾರಿ ಕೊರೋನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಹೇರಿದ್ದರೂ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ. ಹೀಗಾಗಿ ಮತ್ತೆ ಲಾಕ್‍ಡೌನೇ ಪ್ರಬಲವಾದ ಅಸ್ತ್ರ ಎನ್ನುವ ಮಾತು ಕೇಳಿ ಬರುತ್ತಿದೆ.

ಈ ಸಂಬಂಧ ಇಂದು ಕೊರೊನಾ ಟಾಸ್ಕ್ ಫೋರ್ಸ್ ಸದಸ್ಯರ ಜೊತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ತುರ್ತು ಸಭೆ ನಡೆಸಿದರು. ಈ ವೇಳೆ, ತಜ್ಞರು ನೈಟ್ ಕರ್ಫ್ಯೂ ವಿನಾಯ್ತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಬೆಂಗಳೂರಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಲಾಕ್‍ಡೌನ್ ಬಗ್ಗೆ ಪ್ರಸ್ತಾಪಿಸಿದ್ದಾಗಿಯೂ ತಿಳಿದು ಬಂದಿದೆ.

ಲಾಕ್‍ಡೌನ್ ಪ್ರಸ್ತಾಪಕ್ಕೆ ಸುಧಾಕರ್ ಒಪ್ಪಿಗೆ ನೀಡಿಲ್ಲ. ಆದಾಗ್ಯೂ, ಸಮಗ್ರ ವರದಿಯನ್ನು ನೀಡಿ. ಮುಖ್ಯಮಂತ್ರಿಗಳ ಜೊತೆ ಮತ್ತೊಮ್ಮೆ ಚರ್ಚೆ ಮಾಡೋಣ ಎಂದು ಸೂಚಿಸಿದ್ದಾರೆ. ಆದರೆ ಲಾಕ್‍ಡೌನ್ ಸಾಧ್ಯತೆಯನ್ನು ಸುಧಾಕರ್ ಎಲ್ಲಿಯೂ ತಳ್ಳಿ ಹಾಕಿಲ್ಲ. ಹಾಗಾಗಿ ಲಾಕ್‍ಡೌನ್ ಭವಿಷ್ಯ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅಂಗಳದಲ್ಲಿದೆ. ಮುಖ್ಯಮಂತ್ರಿಗಳು ಈಗಾಗಲೇ ಲಾಕ್‍ಡೌನ್ ಮಾತಿಲ್ಲ ಅಂತಲೇ ಹೇಳುತ್ತಿದ್ದಾರೆ. ಆದರೆ ಈಗ ಹಿಂದಿನಂತೆ ಕೇಸ್‍ಗಳ ಸಂಖ್ಯೆ ಕಡಿಮೆ ಇಲ್ಲ. ದಿನದಿಂದ ದಿನಕ್ಕೇ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಹೀಗಾಗಿ ಈ ಪರಿಸ್ಥಿತಿಯಲ್ಲಿ ಸಿಎಂ ಬಿಎಸ್‍ವೈ ಮನಸು ಬದಲಿಸ್ತಾರಾ ಎಂಬ ಪ್ರಶ್ನೆಗೆ ಮಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ತಜ್ಞರ ಸಲಹೆ ಏನು?
ಬೆಂಗಳೂರಿನಲ್ಲಿ ಸೋಂಕು ಭಾರೀ ಏರಿಕೆ ಆಗುತ್ತಿದ್ದು 10 ದಿನ ಲಾಕ್‍ಡೌನ್ ಮಾಡಿದರೆ ಈ ಚೈನ್ ನಿಲ್ಲಬಹುದು. ತಿಂಗಳವರೆಗೆ ನೈಟ್ ಕರ್ಫ್ಯೂ ವಿಸ್ತರಣೆ ಮಾಡಬೇಕು. ಈಗ ಇರುವ ಜಿಲ್ಲೆ ಅಲ್ಲದೇ ಬೆಂಗಳೂರು ಗ್ರಾಮಾಂತರ, ಹಾಸನ, ಬೆಳಗಾವಿ, ಬಳ್ಳಾರಿ, ಮಂಡ್ಯ, ಧಾರವಾಡ ಜಿಲ್ಲೆಗಳಿಗೆ ಕೊರೋನಾ ಕರ್ಫ್ಯೂ ವಿಸ್ತರಣೆ ಮಾಡುವುದು ಉತ್ತಮ. ಲಾಕ್‍ಡೌನ್ ಆಗದಿದ್ದರೆ ವೀಕೆಂಡ್ ಲಾಕ್‍ಡೌನ್ ಆದರೂ ಮಾಡಬೇಕು. 144 ಸೆಕ್ಷನ್ ಪರಿಣಾಮಕಾರಿಯಾಗಿ ಜಾರಿ ಮಾಡಿ ಗುಂಪು ಸೇರುವ ಸ್ಥಳಗಳ ಗುರುತು ಮಾಡಿ ಕ್ರಮ ಕೈಗೊಳ್ಳಬೇಕು.

ತಜ್ಞರ ಆತಂಕ ಏನು?
ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗ್ತಿರೋದಕ್ಕೆ ತಾಂತ್ರಿಕ ಸಲಹಾ ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದೆ. ಮೇನಲ್ಲಿ ಕೊರೋನಾ ಉತ್ತುಂಗ ಸ್ಥಿತಿ ತಲುಪುತ್ತದೆ. ಮುಂದಿನ 2-3 ವಾರ ಮತ್ತಷ್ಟು ಎಚ್ಚರಿಕೆ ಅಗತ್ಯವಾಗಿದೆ. ಮೇ 15ರ ಹೊತ್ತಿಗೆ ಬೆಂಗಳೂರಿನಲ್ಲಿ ನಿತ್ಯ 15 ಸಾವಿರ ಕೇಸ್ ದಾಖಲಾಗಬಹುದು. 2ನೇ ಅಲೆ 80 ರಿಂದ 120 ದಿನ ಇರುತ್ತದೆ. ಹೀಗಾಗಿ ಅಂಬುಲೆನ್ಸ್, ಬೆಡ್ ಕೊರತೆ ಕಾಡಬಹುದು.

ತಜ್ಞರು ಕೊಟ್ಟ ಪರಿಹಾರಗಳು?
– ಕಠಿಣ ನಿಯಮಗಳನ್ನು ಕೂಡಲೇ ಜಾರಿಗೆ ತನ್ನಿ
– ಜನ ಗುಂಪು ಸೇರೋದನ್ನು ನಿಷೇಧಿಸಿ (ಜಾತ್ರೆ, ಮದುವೆ, ಮಾರ್ಕೆಟ್, ಐಸ್‍ಕ್ರೀಂ ಪಾರ್ಲರ್‌ಗಳಲ್ಲಿ ಬ್ರೇಕ್ ಹಾಕಿ)
– ಸೆಕ್ಷನ್ 144 ಕಠಿಣವಾಗಿ ಜಾರಿಗೆ ತನ್ನಿ
– ಸರ್ಕಾರ ಆಸ್ಪತ್ರೆ ವ್ಯವಸ್ಥೆ ಬಲಪಡಿಸಿ
– ಲಸಿಕೆ ವಿತರಣೆ ಹೆಚ್ಚು ಮಾಡಬೇಕು

Comments

Leave a Reply

Your email address will not be published. Required fields are marked *