ಬೆಂಕಿಯಲ್ಲಿದ್ದ ಮಗುವಿನ ಜೀವ ಉಳಿಸಲು ತನ್ನ ಜೀವವನ್ನೇ ತ್ಯಾಗ ಮಾಡಿದ ಮಹಾ ತಾಯಿ

– ಮಗುವನ್ನು ಕ್ಯಾಚ್ ಹಿಡಿದ ಹೀರೋ ಆದ ಮಾಜಿ ಸೈನಿಕ

ವಾಷಿಂಗ್ಟನ್: ಬೆಂಕಿ ಹೊತ್ತಿ ಉರಿಯುತ್ತಿದ್ದ ತನ್ನ ಮನೆಯಿಂದ ತನ್ನ ಮೂರು ವರ್ಷದ ಮಗುವನ್ನು ಎಸೆದು ತಾಯಿಯೊಬ್ಬಳು ಬೆಂಕಿಗಾಹುತಿಯಾಗಿರುವ ಘಟನೆ ಅಮೆರಿಕದ ಅರಿಜೋನಾ ಪ್ರದೇಶದಲ್ಲಿ ನಡೆದಿದೆ.

ಅರಿಜೋನಾ ಪ್ರದೇಶದಲ್ಲಿರುವ ಅಪಾರ್ಟ್‍ಮೆಂಟ್‍ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಆ ಮನೆಯಲ್ಲಿ ಇದ್ದ 30 ವರ್ಷದ ಮಹಿಳೆ ರಾಚೆಲ್ ಲಾಂಗ್ ಮತ್ತು ಅವರ ಎಂಟು ಮತ್ತು ಮೂರು ವರ್ಷದ ಮಕ್ಕಳು ಬೆಂಕಿಯಲ್ಲಿ ಸಿಲುಕಿಕೊಂಡಿದ್ದಾರೆ. ಆಗ ತಾಯಿ ತನ್ನ ಮೂರು ವರ್ಷದ ಮಗುವನ್ನು ಸಹಾಯ ಮಾಡಿ ಎಂದು ಕಿರುಚುತ್ತಾ ಬಾಲ್ಕನಿಯಿಂದ ಕೆಳಗೆ ಎಸೆಸಿದ್ದಾಳೆ. ಆಗ ಸರಿಯಾದ ಸಮಯಕ್ಕೆ ಬಂದ ಮಾಜಿ ಸೈನಿಕ ಫಿಲಿಪ್ ಬ್ಲಾಕ್ಸ್ ಮಗುವನ್ನು ಕ್ಯಾಚ್ ಹಿಡಿದು ಬದುಕಿಸಿದ್ದಾರೆ.

https://twitter.com/Doranimated/status/1280957888111038464

ಸರಿಯಾದ ಸಮಯಕ್ಕೆ ಮಗುವನ್ನು ಓಡಿ ಹೋಗಿ ಫಿಲಿಪ್ಸ್ ಕ್ಯಾಚ್ ಹಿಡಿದಿರುವುದನ್ನು ಅಲ್ಲೇ ಇದ್ದ ಓರ್ವ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾನೆ. ಈ ಘಟನೆಯಲ್ಲಿ ಮಗುವನ್ನು ಕೆಳಗೆ ಎಸೆದ ತಾಯಿ ಸಾವನ್ನಪ್ಪಿದ್ದು, ಆದರೆ ಅವರ ಮಕ್ಕಳನ್ನು ರಕ್ಷಿಸಲಾಗಿದೆ. ಇಬ್ಬರು ಮಕ್ಕಳಿಗೂ ಸಣ್ಣ-ಪುಟ್ಟ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಫಿಲಿಪ್, ಈ ಘಟನೆಯ ನಿಜವಾದ ಹೀರೋ ನಾನಲ್ಲ, ಸುಡುವ ಬೆಂಕಿಯ ಮಧ್ಯದಲ್ಲೂ ತನ್ನ ಮಗುವನ್ನು ಕೆಳಗೆ ಎಸೆದ ತಾಯಿ ನಿಜವಾದ ಹೀರೋ. ತನ್ನ ಮಗುವಿನ ಜೀವ ಉಳಿಸಲು ಆಕೆ ತನ್ನ ಜೀವವನ್ನೇ ತ್ಯಾಗ ಮಾಡಿದ್ದಾಳೆ. ನಾನು ಇಲ್ಲಿ ಏನನನ್ನು ಮಾಡಿಲ್ಲ. ಆಕೆ ಸಹಾಯ ಮಾಡಿ ಎಂದು ಕಿರುಚಿದ್ದು ನನಗೆ ಕೇಳಿತು. ನಾನು ಓಡಿಬಂದೆ ಅಷ್ಟರಲ್ಲಿ ಮಗುವನ್ನು ಎಸೆದರು ನಾನು ಹೋಗಿ ಕ್ಯಾಚ್ ಹಿಡಿದೆ ಅಷ್ಟೇ ಎಂದು ಹೇಳಿದ್ದಾರೆ.

ಸ್ಥಳದಲ್ಲಿ ಇದ್ದ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ಲಾಂಗ್ ಮಗುವನ್ನು ಕೆಳಗೆ ಎಸೆದ ಸಮಯದಲ್ಲಿ ಆಕೆಯನ್ನು ಬೆಂಕಿ ಸುಡುತ್ತಿತ್ತು. ಆದರೆ ಆಕೆ ಅವಳ ಹಿತಕ್ಕಾಗಿ ಕೆಳಗೆ ಜಿಗಿಯದೆ. ಆಕೆ ಅಲ್ಲೇ ಉಳಿದು ತನ್ನ ಮಗುವನ್ನು ಕೆಳಗೆ ಎಸೆದಳು. ಆಕೆ ಅಲ್ಲೇ ತನ್ನ ಪ್ರಾಣವನ್ನು ಬಿಟ್ಟಳು ಎಂದು ಹೇಳಿದ್ದಾರೆ. ಸದ್ಯ ಮನೆಗೆ ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿತು ಎಂಬುದು ತಿಳಿದು ಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *