ಬೃಹತ್ ಮರ ಕಡಿದು, ಹಗ್ಗ ಕಟ್ಟಿಕೊಂಡು ಮರದ ಮೇಲೆಯೇ 9 ಜನರ ರಕ್ಷಿಸಿದ ಪಿಎಸ್‍ಐ

ಚಿಕ್ಕಮಗಳೂರು: ಮಲೆನಾಡ ಮಳೆ ಅಬ್ಬರಕ್ಕೆ ಮನೆ ಸುತ್ತಲೂ ನೀರು ತುಂಬಿಕೊಂಡು ದ್ವೀಪದಂತಿದ್ದ ಮನೆಯಲ್ಲಿದ್ದ ನಾಲ್ಕು ತಿಂಗಳ ಹಸುಗೂಸು ಸೇರಿದಂತೆ 9 ಜನರನ್ನು ಸುರಕ್ಷಿತವಾಗಿ ರಕ್ಷಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಆಲಂದೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಕಡಹೀನಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಆಲಂದೂರು ಗ್ರಾಮದ ಮಂಗಳ, ಶೇಖರ್, ಲಲಿತಾ, ಚಂದ್ರಿಕಾ, ವಿಷ್ಣು, ಗೀತಾ ಅವರ ಮನೆಗಳಿಗೆ ಮಳೆ ನೀರು ನುಗ್ಗಿತ್ತು. ಇವರ ಜೊತೆ 4 ತಿಂಗಳ ಹಸುಗೂಸು ಸಹ ಸಿಲುಕಿತ್ತು. ಮನೆಯ ಸುತ್ತಲೂ ನೀರು ತುಂಬಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಹೋದ ಎನ್.ಆರ್.ಪುರ ಪಿಎಸ್‍ಐ ದಿಲೀಪ್ ಕುಮಾರ್, ಅಗ್ನಿಶಾಮಕ ದಳವರನ್ನ ಸ್ಥಳಕ್ಕೆ ಕರೆಸಿದ್ದರು.

ಮನೆಯ ಸುತ್ತಲೂ ನೀರು ತುಂಬಿಕೊಂಡು ಜಲಾವೃತಗೊಂಡಿದ್ದು, ಮರಗಳು ಸಹ ಅಡ್ಡಾದಿಡ್ಡಿ ಬೆಳೆದಿದ್ದವು. ಮಳೆ ನೀರು ರಭಸವಾಗಿ ಹರಿಯುತ್ತಿದ್ದರಿಂದ ದೋಣಿ ಮೂಲಕ ರಕ್ಷಣೆ ಅಸಾಧ್ಯವಾಗಿತ್ತು. ಕೂಡಲೇ ದೊಡ್ಡ ಮರವನ್ನು ಕತ್ತರಿಸಿ, ನೆಲಕ್ಕೆ ಉರುಳಿಸಿ ಹಗ್ಗ ಕಟ್ಟಿಕೊಂಡು ಅದೇ ಮರದ ಮೇಲೆ ಹೋಗಿ ಅಗ್ನಿ ಶಾಮಕದಳ, ಪೊಲೀಸರು ಹಾಗೂ ಗ್ರಾಮಸ್ಥರು 8 ಜನ ಹಾಗೂ 4 ತಿಂಗಳ ಮಗುವನ್ನು ರಕ್ಷಿಸಿದ್ದಾರೆ.

ಎನ್.ಆರ್.ಪುರ ಪಿಎಸ್‍ಐ ಸಮಯ ಪ್ರಜ್ಞೆಯಿಂದ 9 ಜನರ ಜೀವ ಉಳಿದಿದೆ. ಪೊಲೀಸರು ಸ್ಥಳಕ್ಕೆ ಹೋಗುವುದು ಸ್ವಲ್ಪ ತಡವಾಗಿದ್ದರೂ ಭಾರೀ ಜೀವಹಾನಿ ಸಂಭವಿಸುವ ಸಾಧ್ಯತೆ ಇತ್ತು. ಪೊಲೀಸರು ರಕ್ಷಿಸಿದ 9 ಜನರನ್ನೂ ಅವರ ಸಂಬಂಧಿಗಳ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.

ತಾಲೂಕು ಆಡಳಿತದಿಂದ ಮುಂಜಾಗೃತ ಕ್ರಮವಾಗಿ ಮುತ್ತಿನಕೊಪ್ಪ ಬಿಸಿಎಂ ಹಾಸ್ಟೆಲ್‍ನಲ್ಲಿ ನಿರಾಶ್ರಿತ ಕೇಂದ್ರ ತೆರೆದು ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಅಡುಗೆಯವರು ಹಾಸ್ಟೆಲ್‍ನಲ್ಲಿ ತಂಗಿದ್ದು, ಮಳೆಯಿಂದ ಯಾರಿಗಾದರೂ ಸಮಸ್ಯೆಯಾದರೆ ಹಾಸ್ಟೆಲ್‍ಗೆ ಬಂದು ಉಳಿಯಬಹುದು. ತಾಲೂಕು ಆಡಳಿತ ಕೂಡ ಅಧಿಕಾರಿಗಳಿಗೆ ಅಲರ್ಟ್ ಆಗಿರಲು ಸೂಚಿಸಿದೆ.

Comments

Leave a Reply

Your email address will not be published. Required fields are marked *