ಬಿಲ್ ಗೇಟ್ಸ್​ಗೆ ಇತ್ತು ಅಕ್ರಮ ಸಂಬಂಧ – ಮೈಕ್ರೋಸಾಫ್ಟ್ ತನಿಖೆ ಔಟ್

ವಾಷಿಂಗ್ಟನ್: ಈ ತಿಂಗಳ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಿ ಸುದ್ದಿಯಾಗಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಮಹಿಳಾ ಸಿಬ್ಬಂದಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಈಗ ಬಯಲಾಗಿದೆ.

ಮೈಕ್ರೋಸಾಫ್ಟ್ ಕಂಪನಿಯ ಮಹಿಳಾ ಸಿಬ್ಬಂದಿಯೊಂದಿಗಿದ್ದ ಅಕ್ರಮ ಸಂಬಂಧದ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಕಂಪನಿಯನ್ನು ತೊರೆದಿದ್ದರು ಎಂದು ವರದಿಯಾಗಿದೆ.

ಬಿಲ್ ಗೇಟ್ಸ್ 2000 ಇಸವಿಯಿಂದ 2019ರವರೆಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಷಯದ ಬಗ್ಗೆ ಕಂಪನಿಗೆ ಮಹಿಳಾ ಸಿಬ್ಬಂದಿ ದೂರು ನೀಡಿದ್ದರು. ಬಳಿಕ ಈ ದೂರಿನ ಬಗ್ಗೆ ಕಂಪನಿ ತನಿಖೆ ಕೈಗೊಂಡಿತ್ತು.

ತನಿಖೆ ನಡೆಯುತ್ತಿರುವಾಗಲೇ ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯರು ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಗೇಟ್ಸ್ 2020ರಲ್ಲಿ ನಿರ್ದೇಶಕ ಸ್ಥಾನದಿಂದ ಕೆಳಗೆ ಇಳಿದಿದ್ದರು ಎಂದು ವದಿಯಾಗಿದೆ.

ಮೈಕ್ರೋಸಾಫ್ಟ್ ಸಂಸ್ಥೆ ತನಿಖೆ ನಡೆಸುತ್ತಿರುವಾಗ ತನ್ನ ಘನತೆಗೆ ಧಕ್ಕೆ ಬರಬಹುದು ಎಂಬುದನ್ನು ಮನಗಂಡು ಬಿಲ್ ಗೇಟ್ಸ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ತಂತ್ರಜ್ಞಾನ ಸಲಹೆಗಾರನಾಗಿ ಮುಂದುವರಿಯುತ್ತಿದ್ದಾರೆ.

ಕೆಲದಿನಗಳ ಹಿಂದೆ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ತಮ್ಮ 27 ವರ್ಷದ ದಾಂಪತ್ಯ ಜೀವನವನ್ನು ಕೊನೆಗೊಳಿಸುವುದಾಗಿ ಪ್ರಕಟಿಸಿದ್ದರು. ಆದರೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಎಂಬ ದತ್ತಿ ಸಂಸ್ಥೆಯಲ್ಲಿ ಜೊತೆಯಾಗಿ ದುಡಿಯುತ್ತೇವೆ ಎಂದು ತಿಳಿಸಿದ್ದರು.

1987ರಲ್ಲಿ ಮೆಲಿಂಡಾ ಪ್ರಾಡಕ್ಟ್ ಮ್ಯಾನೇಜರ್ ಆಗಿ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸೇರಿದ್ದರು. ಇವರಿಬ್ಬರು ಕಂಪನಿಯ ಕೆಲಸದಲ್ಲಿ ಜೊತೆಯಾಗಿ ತೊಡಗಿದ್ದ ಸಮಯದಲ್ಲಿ ಪ್ರೇಮ ಮೊಳೆದು 1994ರಲ್ಲಿ ವಿವಾಹವಾಗಿದ್ದರು. ದತ್ತಿ ನಿಧಿ ಕೆಲಸದಲ್ಲಿ ತೊಡಗಿಸಿಕೊಳ್ಳಲು 2008ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿದಿದ್ದರು. ಬಳಿಕ ಕಂಪನಿಯ ಮಂಡಳಿಯಿಂದಲೂ ಹೊರ ಬಂದು ನಂತರ ತಂತ್ರಜ್ಞಾನ ಸಲಹೆಗಾರನಾಗಿ ಮುಂದುವರಿಯುತ್ತಿರುವುದಾಗಿ ತಿಳಿಸಿದ್ದರು.

ಮೇ 4 ರಂದು ಬಿಲ್ ಗೇಟ್ಸ್ ಮತ್ತು ಮೆಲಿಂಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ 27 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ನಾವಿಬ್ಬರು ಸಮ್ಮತಿಯೊಂದಿಗೆ ಬೇರೆ ಬೇರೆಯಾಗಿ ಜೀವಿಸುವುದಾಗಿ ಪ್ರಕಟಿಸಿದ್ದರು. ಇಬ್ಬರು ಜಂಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದೇ ಬರಹ ಇರುವ ಪೋಸ್ಟ್ ಪ್ರಕಟಿಸುವ ಮೂಲಕ ಈ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದರು. ಆದರೆ ಈಗ ಇವರಿಬ್ಬರ ನಡುವಿನ ವಿಚ್ಛೇದನಕ್ಕೆ ಗೇಟ್ಸ್ ಅಕ್ರಮ ಸಂಬಂಧ ಕಾರಣ ಎನ್ನಲಾಗುತ್ತಿದೆ.

ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಹೆಸರಿನಲ್ಲಿ 2000ನೇ ಇಸ್ವಿಯಲ್ಲಿ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

Comments

Leave a Reply

Your email address will not be published. Required fields are marked *