ಬಿರುಕು ಬಿಟ್ಟ ಬೆಟ್ಟ- ಅತಂತ್ರದ ಭೀತಿಯಲ್ಲಿ 15 ಗ್ರಾಮಗಳ ಜನ

ಚಿಕ್ಕಮಗಳೂರು: ಜನವಸತಿ ಪ್ರದೇಶದ ಮೇಲ್ಭಾಗದ ಗುಡ್ಡ ಬಿರುಕು ಬಿಟ್ಟಿರುವುದರಿಂದ ಸುಮಾರು 15 ಹಳ್ಳಿಗಳ ಜನ ಆತಂಕದಲ್ಲಿ ಬದುಕುವಂತಹ ಪರಿಸ್ಥಿತಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದಲ್ಲಿ ನಿರ್ಮಾಣವಾಗಿದೆ.

ಮೂಡಿಗೆರೆ ತಾಲೂಕು ಅಪ್ಪಟ ಮಲೆನಾಡು. ವಾರ್ಷಿಕ ದಾಖಲೆ ಮಳೆ ಬೀಳೋ ಪ್ರದೇಶ. ಕಳೆದ ಎರಡು ವರ್ಷಗಳ ಮಳೆಗಾಲದಲ್ಲೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿದಿತ್ತು. ಸಾವು-ನೋವು ಕೂಡ ಸಂಭವಿಸಿತ್ತು. ಮಲೆನಾಡಿಗರು ಮಳೆ ಎಂದರೆ ಹೆದರುವಂತಹ ವಾತಾರವಣ ನಿರ್ಮಾಣವಾಗಿತ್ತು. ಆದರೆ ಈ ವರ್ಷ ಮಳೆಗಾಲದ ಆರಂಭದಲ್ಲಿ ಮಲೆನಾಡಿಗರು ಮಳೆ ಅಂದ್ರೆ ಬೆಚ್ಚಿ ಬೀಳುವಂತಾಗಿದೆ.

ಕಳೆದ ಶನಿವಾರ ಕಳಸ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಕಳಸ ಸಮೀಪದ ಆನೆಗುಡ್ಡದಲ್ಲಿ ಭಾರೀ ಶಬ್ದ ಕೇಳಿ ಬಂದಿದೆ. ಶಬ್ದ ಕೇಳಿ ಜನ ಕೂಡ ಕಂಗಾಲಾಗಿದ್ದರು. ಮರುದಿನ ಸ್ಥಳೀಯರು ಬೆಟ್ಟ ಹತ್ತಿ ನೋಡಿದಾಗ ಆನೆಗುಡ್ಡ ಅಲ್ಲಲ್ಲೇ ಬೆಟ್ಟ ಬಿರುಕು ಬಿಟ್ಟಿದೆ. ಬೃಹತ್ ಕಲ್ಲುಗಳು ಜಾರಿವೆ. ಇದನ್ನು ಕಣ್ಣಾರೆ ಕಂಡ ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ಈ ಗುಡ್ಡದ ಸುತ್ತಮುತ್ತ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳು ಇವೆ. ಬೆಟ್ಟ ಬಾಯ್ಬಿಟ್ಟಿರೋದನ್ನು ಕಣ್ಣಾರೆ ಕಂಡ ಜನ ಮಳೆ ಎಂದರೆ ಆತಂಕಗೊಳ್ಳುತ್ತಿದ್ದಾರೆ.

ಭೂಮಿಯೊಳಗಿಂದ ಭಾರೀ ಶಬ್ದ ಕೇಳಿ ಬಂದು ಬೆಟ್ಟ ಬಾಯ್ಬಿಡುವ ಸಂದರ್ಭ ಪ್ರಾಣಿ-ಪಕ್ಷಿಗಳ ಅರಚಾಟ-ಕಿರುಚಾಟ ಕೂಡ ಸ್ಥಳೀಯರ ಅನುಭವಕ್ಕೆ ಬಂದಿದೆ. ಕಳಸದಿಂದ ಸುಮಾರು 9 ರಿಂದ 10 ಕಿ.ಮೀ. ದೂರದಲ್ಲಿರೋ ಈ ಬೆಟ್ಟದ ತಪ್ಪಲಿನ ಗ್ರಾಮಗಳು ಕಳೆದ ವರ್ಷದ ಭಾರೀ ಮಳೆಯಿಂದ ನಗರ ಪ್ರದೇಶದ ಸಂಪರ್ಕವನ್ನೇ ಕಳೆದುಕೊಂಡಿದ್ದರು. ಈ ವರ್ಷ ಮಳೆಗಾಲದ ಆರಂಭದಲ್ಲೇ ಇಂತದ್ದೊಂದು ಘಟನೆ ನಡೆದಿರುವುದರಿಂದ ಮಲೆನಾಡಿಗರು ಈ ವರ್ಷ ಮಳೆರಾಯನ ಅಬ್ಬರ-ಅನಾಹುತ ಏನೋ ಎಂದು ಕಂಗಾಲಾಗಿದ್ದಾರೆ. ಈ ವರ್ಷವೂ ಕಳೆದ ವರ್ಷದಂತೆ ಮಳೆ ಸುರಿಯುತ್ತಾ, ಅದೇ ರೀತಿ ಮಳೆ ಸುರಿದರೆ ಬೆಟ್ಟ ಕುಸಿದು ಬೀಳುತ್ತಾ ಎಂಬ ಅನುಮಾನದೊಂದಿಗೆ ಸ್ಥಳಿಯರು ಆತಂಕದಲ್ಲೇ ಬದುಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *