ಬಿರಿಯಾನಿಯಲ್ಲಿ ಲೆಗ್ ಪೀಸ್ ಕಡಿಮೆ ಇದೆ-ಸಚಿವರನ್ನು ಟ್ಯಾಗ್ ಮಾಡಿ ದೂರು ನೀಡಿದ ವ್ಯಕ್ತಿ

ಹೈದರಾಬಾದ್: ಆನ್‍ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡ ಬಿರಿಯಾನಿಯಲ್ಲಿ ಲೆಗ್ ಪೀಸ್ ಇರಲಿಲ್ಲ ಎಂದು ವ್ಯಕ್ತಿಯೊಬ್ಬ ಟ್ವಿಟ್ಟರ್‍ನಲ್ಲಿ ಸಚಿವ ಕೆಟಿ ರಾಮರಾವ್ ಅವರನ್ನು ಟ್ಯಾಗ್ ಮಾಡಿ ದೂರು ನೀಡಿದ್ದು ಇದೀಗ ಸುದ್ದಿಯಾಗುತ್ತಿದೆ.

ತೊಟಕುರಿ ರಘುಪತಿ ಎಂಬಾತ ಆರ್ಡರ್ ಮಾಡಿ ತರಿಸಿಕೊಂಡ ಬಿರಿಯಾನಿಯ ಬಗ್ಗೆ ಟ್ವಿಟ್ಟರ್‍ನಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದಾನೆ. ಬಿರಿಯಾನಿಯ ಗುಣಮಟ್ಟ ಚೆನ್ನಾಗಿರಲಿಲ್ಲ ಎನ್ನುವುದು ಆತನ ತಕರಾರು. ತಾನು ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಹೆಚ್ಚುವರಿ ಮಸಾಲೆ ಮತ್ತು ಹೆಚ್ಚುವರಿ ಚಿಕನ್ ಲೆಗ್ ಪೀಸ್ ಇರಲಿಲ್ಲ ಎಂದು ಅದರ ಫೋಟೊದೊಂದಿಗೆ ಅಸಮಾಧಾನವನ್ನು ಜೊಮ್ಯಾಟೋಗೆ ದೂರು ನೀಡಿದ್ದಾನೆ. ಆದರೆ ತನ್ನ ಟ್ವಿಟ್ಟರ್ ಪೋಸ್ಟ್‌ನಲ್ಲಿ ತೆಲಂಗಾಣದ ನಗರಾಭಿವೃದ್ಧಿ ಸಚಿವ ಕೆಟಿ ರಾಮರಾವ್ ಅವರನ್ನೂ ಟ್ಯಾಗ್ ಮಾಡಿದ್ದಾನೆ. ಇದನ್ನೂ ಓದಿ:  ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಮಕ್ಕಳ ಕ್ಯೂಟ್ ವೀಡಿಯೋ ವೈರಲ್

ಕೆಟಿ ರಾಮರಾವ್ ಅವರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಅನ್ನು ಕೂಡ ಟ್ಯಾಗ್ ಮಾಡಿದ್ದು ಇದಕ್ಕೆ ತಮಾಷೆಯ ತಿರುವು ನೀಡಿದೆ. ಟ್ವಿಟ್ಟರ್‍ನಲ್ಲಿ ಕೋವಿಡ್ ಸಂಬಂಧಿ ಮನವಿಗಳು ಹಾಗೂ ಅಹವಾಲುಗಳನ್ನು ಪರಿಶೀಲಿಸಿ ಅದಕ್ಕೆ ನೆರವು ನೀಡುವ ಕೆಲಸ ಮಾಡುತ್ತಿರುವ ಕೆಟಿಆರ್, ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ನನ್ನನ್ನೇಕೆ ಟ್ಯಾಗ್ ಮಾಡಿದ್ದೀರಿ ಸಹೋದರ? ನನ್ನಿಂದ ನೀವು ಏನನ್ನು ನಿರೀಕ್ಷಿಸಿದ್ದೀರಿ ಎಂದು ಕೆಟಿಆರ್ ಪ್ರಶ್ನಿಸಿದ್ದಾರೆ. ಕೆಟಿಆರ್ ಪ್ರತಿಕ್ರಿಯೆ ನೀಡಿ ಟ್ವೀಟ್‍ಗೆ ರಿಪ್ಲಯ್ ಮಾಡಿದ್ದಾರೆ.

ಈ ಟ್ವೀಟ್ ಸಾಂಕ್ರಾಮಿಕದಿಂದ ನಲುಗಿದ್ದ ಜನರಲ್ಲಿ ನಗುಮೂಡಿಸಲು ನೆರವಾಗುತ್ತಿದೆ. ನೆಟ್ಟಿಗರು ಕೆಟಿಆರ್ ಅವರ ಪ್ರತಿಕ್ರಿಯೆಯನ್ನು ಮೀಮ್‍ಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಲೆಗ್ ಪೀಸ್ ಅನ್ನು ಕಡ್ಡಾಯ ಮಾಡಿಸಿ ಎಂದು ಕೆಲವರು ಕೆಟಿಆರ್‍ಗೆ ಸಲಹೆ ನೀಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ನಗುವಂತೆ ಮಾಡಿದ್ದಕ್ಕೆ ಕೆಟಿಆರ್‍ಗೆ ಧನ್ಯವಾದ ಎಂದು ಕೆಲವು ಹೇಳಿದ್ದಾರೆ. ಉತ್ತಮ ಬಿರಿಯಾನಿ ಪಡೆಯುವುದು ನಿಜಕ್ಕೂ ರಾಷ್ಟ್ರೀಯ ಮಹತ್ವದ ಸಂಗತಿಯಾಗಿದೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

ಬಿರಿಯಾನಿಯೊಂದರ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಚಿವರು ಹಾಗೂ ಸಂಸದರನ್ನೂ ಚರ್ಚೆಗೆ ಎಳೆದು ತಂದಿದೆ. ಬಿರಿಯಾನಿ ಪ್ರಿಯನೊಬ್ಬನ ಕಿತಾಪತಿ ಈಗ ತಮಾಷೆಯ ವಿಚಾರವಾಗಿ ಚರ್ಚೆಯಾಗುತ್ತಿದೆ.

Comments

Leave a Reply

Your email address will not be published. Required fields are marked *