ಬಿಟ್ ಕಾಯಿನ್ ಹೆಸರಲ್ಲಿ 45 ಲಕ್ಷ ರೂಪಾಯಿ ವಂಚನೆ

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಅಮಿತ್ ಭಾರದ್ವಾಜ್ ಗೇನ್ ಬಿಟ್ ಕಾಯಿನ್ ವಂಚನೆ ಪ್ರಕರಣದಲ್ಲಿ ಹುಬ್ಬಳ್ಳಿಯವರೂ ಮೋಸ ಹೋಗಿರುವ ಪ್ರಕರಣವೊಂದು ಪತ್ತೆಯಾಗಿದೆ.

ಮೂರು ವರ್ಷಗಳ ಹಿಂದೆ ಬಿಟ್ ಕಾಯಿನ್ ನೀಡುವುದಾಗಿ ನಂಬಿಸಿ ನಮ್ಮಿಂದ 45 ಲಕ್ಷ ಪಡೆದು ವಂಚಿಸಲಾಗಿದೆ ಎಂದು ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿಯ ತಾಡಪತ್ರಿ ಗಲ್ಲಿಯಲ್ಲಿ ಕಚೇರಿ ತೆರೆದಿದ್ದ, ಭವಾನಿ ನಗರದ ಚೇತನ್ ಪಾಟೀಲ್ ಎಂಬಾತ ನಂಬಿಸಿ ಹಣ ಪಡೆದು ವಂಚಿಸಿದ್ದಾರೆ ಎಂದು ವಾಸಪ್ಪ ಲೋಕಪ್ಪ ಅಂಕುಷ್ಕನಿ ಎಂಬವರು ದೂರು ದಾಖಲಿಸಿದ್ದಾರೆ.

ಚೇತನ್ ಪಾಟೀಲ್ ಪ್ರಕರಣದ ಮೊದಲ ಆರೋಪಿಯಾದರೆ, ದೆಹಲಿಯ ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಮಹೇಂದ್ರ ಕುಮಾರ್ ಹಾಗೂ ಅಮಿತ್ ರಾಜೇಂದ್ರ ಬೀರ್ ವಂಚನೆ ಮಾಡಿದ ಆರೋಪಿಗಳಾಗಿದ್ದಾರೆ.

2017ರಲ್ಲಿ ಕಂಪನಿಯ ಪರವಾಗಿ ಪ್ರತಿಷ್ಠಿತ ಹೊಟೆಲ್‍ಗಳಲ್ಲಿ ಸೆಮಿನಾರ್ ನಡೆಸಿದ ಚೇತನ್ ಪಾಟೀಲ್, ಅಮಿತ್ ಬೀರ್ ಸೇರಿ ಇತರರು ವೇರಿಯೇಬಲ್ ಟೆಕ್ ಪ್ರೈ. ಲಿ. ಕಂಪನಿಯ ಬಿಟ್ ಕಾಯಿನ್ ಮೇಲೆ ನಾವು ಸಾಕಷ್ಟು ಜನರಿಗೆ ಲಾಭ ಮಾಡಿಕೊಟ್ಟಿದ್ದೇವೆ ಎಂದು ನಂಬಿಸಿದ್ದರು. 1 ಬಿಟ್ ಕಾಯಿನ್‍ಗೆ 1 ಲಕ್ಷದಂತೆ 45 ಬಿಟ್ ಕಾಯಿನ್ ನೀಡುವುದಾಗಿ ನಂಬಿಸಿದ್ದರು. ನಾನು ಹಾಗೂ ಪತ್ನಿ, ಮಗನಿಂದ ತಲಾ 15 ಲಕ್ಷದಂತೆ ಒಟ್ಟು 45 ಲಕ್ಷ ಹಣವನ್ನು 2017ರ ಏಪ್ರಿಲ್ 13ರಂದು ಪಡೆದಿದ್ದೆವು. ಅಲ್ಲದೆ ತಲಾ 15 ಬಿಟ್‍ಕಾಯಿನ್‍ಗಳ ಮೂರು ಇನ್‍ವೈಸ್ ನಂಬರ್ ನೀಡಿದ್ದರು. ಆದರೆ ಈವರೆಗೂ ಬಿಟ್ ಕಾಯಿನ್ ನೀಡದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Comments

Leave a Reply

Your email address will not be published. Required fields are marked *