ಬಿಜೆಪಿ ಸೇರಿದ 24 ಗಂಟೆಯಲ್ಲೇ ಮಾಜಿ ಫುಟ್ಬಾಲ್ ಆಟಗಾರ ರಾಜಕೀಯಕ್ಕೆ ಗುಡ್‍ಬೈ

ಕೋಲ್ಕತ್ತಾ: ಬಿಜೆಪಿ ಸೇರಿದ ಭಾರತದ ಮಾಜಿ ಫುಟ್ಬಾಲ್ ಆಟಗಾರ ಮೆಹ್ತಾಬ್ ಹುಸೇನ್ 24 ಗಂಟೆ ಕಳೆಯುವ ವೇಳೆಗೆ ರಾಜಕೀಯದಿಂದ ದೂರವಾಗಿದ್ದಾರೆ.

ಪಶ್ಚಿಮ ಬಂಗಾಳದ ಮೆಹ್ತಾಬ್ ಹುಸೇನ್ ಫುಟ್ಬಾಲ್‍ನಲ್ಲಿ ಮಿಡ್ ಫೀಲ್ಡ್ ಜನರಲ್ ಆಗಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇತ್ತ ಗುರುವಾರಷ್ಟೇ ಬಿಜೆಪಿ ರಾಜಕೀಯ ಪ್ರವೇಶ ಮಾಡಿದ್ದ ಅವರು 24 ಗಂಟೆ ಕಳೆಯುವ ವೇಳೆಗೆ ರಾಜಕೀಯದಿಂದ ದೂರವಾಗಿದ್ದಾರೆ. ರಾಜಕೀಯಕ್ಕೆ ಸೇರಿದ ನನ್ನ ನಿರ್ಧಾರದ ಕುರಿತು ಕುಟುಂಬಸ್ಥರು ಮತ್ತು ಸ್ನೇಹಿತರು ಆತಂಕ ವ್ಯಕ್ತಪಡಿಸಿದ್ದರು. ಆದ್ದರಿಂದ ನನ್ನ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಹುಸೇನ್ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಫುಟ್ಬಾಲ್ ಮಾಜಿ ನಾಯಕರಾಗಿರುವ ಹುಸೇನ್, ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ 24 ಗಂಟೆ ಕಳೆಯುವ ಮುನ್ನವೇ ನನಗೆ ಇಂದಿನಿಂದ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವಿಲ್ಲ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಭಾರತ ಪರ 30 ಪಂದ್ಯಗಳನ್ನು ಆಡಿರುವ ಹುಸೇನ್ ಪ್ರಜೆಗಳಿಗೆ ಸೇವೆ ಮಾಡಲು ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ಹೇಳಿದ್ದರು. ಅಲ್ಲದೇ ತಮ್ಮ ಪ್ರಯತ್ನಕ್ಕೆ ಜನರು ಬೆಂಬಲ ನೀಡಬೇಕು ಎಂದು ಕೋರಿದ್ದರು. ಆದರೆ ಜನರು ನನ್ನನ್ನು ರಾಜಕೀಯ ನಾಯಕನಾಗಿ ನೋಡಲು ಇಷ್ಟಪಡಲಿಲ್ಲ ಎಂದು ಹುಸೇನ್ ಹೇಳಿದ್ದಾರೆ.

2018-19ರಲ್ಲಿ ಫುಟ್ಬಾಲ್ ಆಟಕ್ಕೆ ನಿವೃತ್ತಿ ಘೋಷಿಸಿದ್ದ ಹುಸೇನ್, ಪತ್ನಿ ಹಾಗೂ ಮಕ್ಕಳಿಗೂ ಅವರು ರಾಜಕೀಯ ಸೇರ್ಪಡೆಯಾಗುವುದು ಇಷ್ಟವಿರಲಿಲ್ಲ ಎನ್ನಲಾಗಿದೆ. ಆದರೆ ಹುಸೇನ್ ರಾಜಕೀಯದಿಂದ ದೂರವಾಗಲು ತೃಣಮೂಲ ಕಾಂಗ್ರೆಸ್ ಪಕ್ಷದ ಬೆದರಿಕೆಗಳೇ ಕಾರಣ ಎಂದು ಬಿಜೆಪಿ ಆರೋಪಿಸಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಬೆದರಿಕೆಗಳು ಈ ಹಿಂದೆಯೂ ಹಲವು ಬಾರಿ ನೋಡಿದ್ದೇವೆ. ಆದರೆ ಇಂತಹ ವರ್ತನೆಯಿಂದ ಜನರ ಬೆಂಬಲ ಪಡೆಯಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಕಾರ್ಯದರ್ಶಿ ಸಯಂತನ್ ಬಸು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *