ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಬೆಂಗ್ಳೂರು ಭೇಟಿಗೆ ಮುಹೂರ್ತ ಫಿಕ್ಸ್

ಬೆಂಗಳೂರು: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಬಿಜೆಪಿ ಉಸ್ತುವಾರಿಗಳೂ ಆದ ಅರುಣ್ ಸಿಂಗ್ ಅವರು ಜೂನ್ 16ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಮೂರು ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಲಿರುವ ಅರುಣ್ ಸಿಂಗ್, ಸಿಎಂ, ರಾಜ್ಯಾಧ್ಯಕ್ಷರು, ಸಚಿವರು, ಸಂಸದರು ಹಾಗೂ ಶಾಸಕರ ಜೊತೆ ಪ್ರತ್ಯೇಕ ಚರ್ಚೆ ನಡೆಸಲಿದ್ದಾರೆ.

ಅರುಣ್ ಸಿಂಗ್ ಪ್ರವಾಸ ವಿವರ ಹೀಗಿದೆ:
– ಜೂನ್ 16 ರ ಮಧ್ಯಾಹ್ನ 3.30ಕ್ಕೆ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು.
– ಸಂಜೆ 4.20ಕ್ಕೆ ಕುಮಾರಕೃಪಾ ಅತಿಥಿಗೃಹಕ್ಕೆ ತೆರಳುವರು.
– ಸಂಜೆ 4.45ಕ್ಕೆ ರಾಜ್ಯ ಬಿಜೆಪಿ ಕಾರ್ಯಾಲಯ  ‘ಜಗನ್ನಾಥ ಭವನ’ಕ್ಕೆ ತೆರಳುವರು.

– ಅಲ್ಲಿ 5 ಗಂಟೆಗೆ ರಾಜ್ಯದ ಸಚಿವರ ಜೊತೆ ಸಭೆ ನಡೆಸುವರು.
– ರಾತ್ರಿ ಅವರು ಕುಮಾರಕೃಪಾ ಅತಿಥಿಗೃಹದಲ್ಲಿ ವಾಸ್ತವ್ಯ ಇರಲಿದ್ದಾರೆ.
– ಜೂನ್ 17 ಮತ್ತು 18 ರಂದು ಅರುಣ್ ಸಿಂಗ್ ಸರಣಿ ಸಭೆಗಳು ನಡೆಸುವರು

– ಜೂನ್ 18 ರಂದು ಸಂಜೆ 5 ಕ್ಕೆ ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ
– ಜೂನ್ 18 ರ ಸಂಜೆ 7 ರ ಬಳಿಕ ಅರುಣ್ ಸಿಂಗ್ ದೆಹಲಿಗೆ ವಾಪಸ್

ಇತ್ತ ಅರುಣ್ ಸಿಂಗ್ ಆಗಮಿಸುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಭಿನ್ನರ ಬಣದಲ್ಲಿ ಬಗೆ ಬಗೆ ಚರ್ಚೆ, ಸಮಾಲೋಚನೆಗಳು ಶುರುವಾಗಿವೆ. ಅರುಣ್ ಸಿಂಗ್ ಎದುರು ಯಾರ್ಯಾರು, ಏನೇನು ಮಾತಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಅರುಣ್ ಸಿಂಗ್ ಬಳಿ ಯಾವೆಲ್ಲ ವಿಷಯಗಳ ಚರ್ಚೆ ಮಾಡಬೇಕು ಎಂಬುದರ ಬಗ್ಗೆ ನಾಳೆ ಗುಪ್ತ ಸಭೆ ನಡೆಸಲು ಭಿನ್ನರು ಚಿಂತನೆ ನಡೆಸಿದ್ದಾರೆ.

ಅರುಣ್ ಸಿಂಗ್ ಈಗಾಗಲೇ ಯಡಿಯೂರಪ್ಪ ಮುಂದಿನ ಎರಡೂ ವರ್ಷ ಸಿಎಂ ಅಂತ ಹೇಳಿದ್ದಾರೆ. ಹೀಗಿದ್ದ ಮೇಲೆ ನಮ್ಮ ಬೇಡಿಕೆ, ನಮ್ಮ ಅಭಿಪ್ರಾಯಕ್ಕೆ ಬೆಲೆ ಕೊಡ್ತಾರಾ ಅಥವಾ ಅರುಣ್ ಸಿಂಗ್ ಬಿಎಸ್‍ವೈ ಪರ ಹೇಳಿಕೆ ಕೊಟ್ಮೇಲೆ ನಮ್ಮ ಅಭಿಪ್ರಾಯಕ್ಕೆ ಅರ್ಥ ಇರುತ್ತಾ ಎಂಬೆಲ್ಲ ಪ್ರಶ್ನೆ ಮೂಡಿದ್ದು, ಭಿನ್ನರ ಬಣದಲ್ಲಿ ಅರುಣ್ ಸಿಂಗ್ ಹೇಳಿಕೆ ಬಗ್ಗೆಯೂ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

Comments

Leave a Reply

Your email address will not be published. Required fields are marked *