ಬಿಜೆಪಿ ಮಗನ ಆಸೆಗಾಗಿ 5 ಹೆಣ್ಮಕ್ಕಳನ್ನ ಹುಟ್ಟಿಸ್ತು- ಕಾಂಗ್ರೆಸ್ ಶಾಸಕ

-ಆಕ್ರೋಶದ ಬಳಿಕ ಟ್ವೀಟ್ ಡಿಲೀಟ್

ಭೋಪಾಲ್: ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕ ಜೀತೂ ಪಟವಾರಿ ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆ ಕೇಳಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಜೀತು ಪಟವಾರಿ, ಕೇಂದ್ರ ಓರ್ವ ಮಗನ ಆಸೆಗಾಗಿ ಐದು ಹೆಣ್ಣು ಮಕ್ಕಳನ್ನು ಹುಟ್ಟಿಸಿದೆ ಎಂದು ಬರೆದುಕೊಂಡಿದ್ದಾರೆ.

ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಲೇ ಎಚ್ಚೆತ್ತ ಜೀತೂ ತಮ್ಮ ಟ್ವೀಟ್ ಡಿಲೀಟ್ ಮಾಡಿ, ನಿಮ್ಮ ಭಾವನೆಗಳಿಗೆ ನೋವು ಆಗಿದ್ದರೆ ಕ್ಷಮೆ ಕೇಳುತ್ತನೆ ಎಂದು ಸ್ಪಷ್ಟನೆ ನೀಡಿ ಮಗದೊಂದು ಟ್ವೀಟ್ ಮಾಡಿದ್ದಾರೆ.

ಇಂದೋರ್ ಜಿಲ್ಲೆಯ ರಾಊ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಜೀತೂ ಪಟವಾರಿ ಟ್ವೀಟ್ ಮೂಲಕ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಓರ್ವ ಮಗನ ಆಸೆಗಾಗಿ ಐದು ಹೆಣ್ಣು ಮಕ್ಕಳಿಗೆ ಕೇಂದ್ರ ಜನ್ಮ ನೀಡಿದೆ. ನೋಟ್ ಬ್ಯಾನ್, ಜಿಎಸ್‍ಟಿ, ಬೆಲೆ ಏರಿಕೆ, ನಿರುದ್ಯೋಗ ಮತ್ತು ನಿಧಾನಗತಿ ಈ ಐದಕ್ಕೆ ಜನ್ಮ ನೀಡಿತು. ಆದ್ರೆ ‘ಅಭಿವೃದ್ಧಿ’ ಹೆಸರಿನ ಮಗನ ಜನನವೇ ಆಗಲಿಲ್ಲ ಎಂದು ಬರೆದುಕೊಂಡಿದ್ದರು. ಟ್ವೀಟಿಗೆ ಬಿಜೆಪಿ ನಾಯಕರು ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಶಾಸಕರ ಹೇಳಿಕೆ ಲಿಂಗ ಅಸಮಾನತೆಯಿಂದ ಕೂಡಿದೆ. ಹಾಗಾಗಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದರು.

ಕಾಂಗ್ರೆಸ್ ಶಾಸಕರ ಹೇಳಿಕೆ ಪ್ರತಿಕ್ರಿಯಿಸಿರುವ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಇಡೀ ದೇಶ ರಾಣಿ ದುರ್ಗಾವತಿ ಬಲಿದಾನವನ್ನ ನೆನಪು ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್ ಮಹಿಳೆಯರಿಗೆ ಅವಮಾನ ಮಾಡುತ್ತಿದೆ. ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಇಂತಹ ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರ ಮನಸ್ಥಿತಿ ತಿಳಿಯುತ್ತದೆ ಎಂದು ತಿರುಗೇಟು ನೀಡಿದ್ದಾರೆ.

Comments

Leave a Reply

Your email address will not be published. Required fields are marked *