ಬಿಗ್‍ಬಾಸ್ ಮನೆಯಲ್ಲಿ ಕೊಟ್ಟ ಮಾತಿನಂತೆ ಫುಡ್ ಕಿಟ್ ವಿತರಿಸಿದ ನಟಿ ಶುಭಾ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ತಾಂಡವವಾಡುತ್ತಿದ್ದು, ಬೆಡ್, ಆಕ್ಸಿಜನ್ ಸಿಗದೆ ಜನ ಸಾವನ್ನಪ್ಪುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಬಿಗ್‍ಬಾಸ್ ಮನೆಯಲ್ಲಿ ಪ್ರಸಾರ ಮಾಡಲಾಗಿತ್ತು. ಈ ವೇಳೆ ನಟಿ ಶುಭಾ ಪೂಂಜಾ ಅವರು ಒಂದು ಮಾತು ಕೊಟ್ಟಿದ್ದರು.

ಹೌದು. ಕೊನೆಯ ದಿನ ಬಿಗ್ ಬಾಸ್ ಮನೆಯಲ್ಲಿ ಕೊರೊನಾದಿಂದ ರಾಜ್ಯ ಎದುರಿಸುತ್ತಿರುವ ಭೀಕರತೆಯ ಮಾಹಿತಿ ನೀಡಲಾಗಿತ್ತು. ಅಲ್ಲದೆ ರಾಜ್ಯದಲ್ಲಿ ಲಾಕ್ ಡೌನ್ ಹೇರಲಾಗಿರುವ ಮುಖ್ಯಮಂತ್ರಿಗಳ ಬೈಟ್ ಕೂಡ ಪ್ರಸಾರ ಮಾಡಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಪರ್ಧಿಗಳು ಆತಂಕಕ್ಕೀಡಾಗಿ ಕಣ್ಣೀರು ಹಾಕಿದ್ದರು.

ಇಷ್ಟು ದಿನ ನಮಗೆ ರಾಜ್ಯದಲ್ಲಿ ಏನು ಆಗುತ್ತಿದೆ ಅಂತಾನೇ ಗೊತ್ತಿರಲಿಲ್ಲ. ಆದರೆ ಇದೀಗ ನಮಗೆ ಪರಿಸ್ಥಿತಿ ಅರ್ಥವಾಗಿದ್ದು, ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಲು ನಿರ್ಧರಿಸಿರುವುದಾಗಿ ಶುಭಾ ಪೂಂಜಾ ಮಾತು ಕೊಟಿದ್ದರು.

ಇದೀಗ ಕೊಟ್ಟ ಮಾತಿನಿಂತೆ ಶುಭಾ ನಡೆದುಕೊಂಡಿದ್ದಾರೆ. ರಸ್ತೆಗಿಳಿದು ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಡಿಯಿಟ್ಟಿದ್ದಾರೆ. ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ್ದಾರೆ. ಅಲ್ಲದೆ ಆಹಾರ ಕಿಟ್ ವಿತರಿಸುತ್ತಿರುವ ಕೆಲವೊಂದು ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡು, ನನ್ನ ಚಿಕ್ಕ ಪ್ರಯತ್ನ ಮುಂದಿನ ದಿನದಲ್ಲಿ ಇನ್ನೂ ಒಂದಷ್ಟು ಜನಗಳಿಗೆ ತಲುಪುವ ಪ್ರಯತ್ನವನ್ನು ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ಈಗಾಗಲೇ ಹಲವಾರು ಮಂದಿ ಕಲಾವಿದರು ಸಹಾಯ ಹಸ್ತ ಚಾಚಿದ್ದಾರೆ. ಹಿರಿಯ ನಟಿ ಲೀಲಾವತಿ, ಪುತ್ರ ವಿನೋದ್, ನಟ ಉಪೇಂದ್ರ, ನಟಿಯರಾದ ರಾಗಿಣಿ, ಸಂಜನಾ ರಸ್ತೆಗಿಳಿದು ಬಡವರ ಬೆನ್ನಿಗೆ ನಿಂತಿದ್ದಾರೆ. ಇದೀಗ ಶುಭಾ ಪೂಂಜಾ ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನೇರವಾಗಿ ರೇಷನ್ ಖರೀದಿಸಿ ಅದನ್ನು ಬಡವರಿಗೆ ಹಂಚುವ ಕೆಲಸ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *