ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಮುನ್ನುಡಿ- ನಾಸಾ, ಸ್ಪೇಸ್ ಎಕ್ಸ್ ರಾಕೆಟ್ ಉಡಾವಣೆ ಯಶಸ್ವಿ

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಮೊದಲ ಬಾರಿಗೆ ಖಾಸಗಿ ಕಂಪನಿ ಸ್ಪೇಸ್ ಎಕ್ಸ್ ಅಭಿವೃದ್ಧಿ ಪಡಿಸಿದ ರಾಕೆಟ್ ಮೂಲಕ ನಾಲ್ವರು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ಐಎಸ್ಎಸ್)ಕ್ಕೆ ಯಶಸ್ವಿಯಾಗಿ ಕಳುಹಿಸಿ ಮೈಲಿಗಲ್ಲು ಸೃಷ್ಟಿಸಿದೆ.

ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಫಾಲ್ಕನ್ 9 ರಾಕೆಟ್ ಉಡಾವಣೆ ಮಾಡುವ ಮೂಲಕ ನಾಸಾ ಈ ಸಾಧನೆ ಮಾಡಿದೆ.

ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ದೇಶಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಭಿವೃದ್ಧಿ ಪಡಿಸಿದ ರಾಕೆಟ್ ಮೂಲಕ ಕಳುಹಿಸಿ ಕೊಡುತ್ತಿದ್ದವು. ಆದರೆ ಈಗ ಖಾಸಗಿ ಕಂಪನಿ ಮೂಲಕ ಅಮೆರಿಕ ಈ ಯೋಜನೆಗೆ ಕೈ ಹಾಕಿದ್ದು ಐಎಸ್ಎಸ್ ಸೇರುವ ಪ್ರಯತ್ನ ಯಶಸ್ವಿಯಾಗಿದೆ.ಖಾಸಗಿ ಒಡೆತನದ ರಾಕೆಟ್ ನಲ್ಲಿ ಸಿಬ್ಬಂದಿಯನ್ನು ಕಳುಹಿಸುವ ನಾಸಾದ ಮೊದಲ ಪೂರ್ಣ ಪ್ರಮಾಣದ ಯೋಜನೆ ಇದಾಗಿದೆ.

ಅಮೆರಿಕ ವಾಯುಪಡೆಯ ಕರ್ನಲ್ ಮೈಲ್ ಹಾಪ್‌ಕಿನ್, ಭೌತವಿಜ್ಞಾನಿ ಶಾನನ್ ವಾಕರ್, ಜಪಾನಿನ ಗಗನಯಾತ್ರಿ ಸೂಚಿ ನೊಗುಚಿ ಮತ್ತು ನೌಕಾಪಡೆಯ ಕಮಾಂಡರ್ ಮತ್ತು ರೂಕಿ ಗಗನಯಾತ್ರಿ ವಿಕ್ಟರ್ ಗ್ಲೋವರ್ ಆರು ತಿಂಗಳ ಕಾಲ ಅಲ್ಲೇ ಇದ್ದು ಸಂಶೋಧನೆ ನಡೆಸಲಿದ್ದಾರೆ‌.

ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ನಾಸಾದ ಯಶಸ್ವಿ ಉಡಾವಣೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಎಲೆಕ್ಟ್ರಿಕ್ ವಾಹನ ಕಂಪನಿ ಟೆಸ್ಲಾ ಸಂಸ್ಥಾಪಕ ಇಲಾನ್ ಮಾಸ್ಕ್ 18 ವರ್ಷದ ಹಿಂದೆ ಸ್ಪೇಸ್ ಎಕ್ಸ್ ಕಂಪನಿಯನ್ನು ಸ್ಥಾಪಿಸಿದ್ದರು.‌ ಸ್ಪೇಸ್ ಎಕ್ಸ್ ಮೇ ತಿಂಗಳಿನಲ್ಲಿ ಯಶಸ್ವಿಯಾಗಿ ಬಾಹ್ಯಾಕಾಶ ಕೇಂದ್ರಕ್ಕೆ ಇಬ್ಬರು ಗಗನಯಾತ್ರಿಗಳನ್ನು ಕಳುಹಿಸಿ ಯಶಸ್ವಿಯಾಗಿತ್ತು. ಅಷ್ಟೇ ಅಲ್ಲದೇ ಇಬ್ಬರು ಮೂರು ತಿಂಗಳ ಹಿಂದೆ ಯಶಸ್ವಿಯಾಗಿ ಭೂಮಿಯಲ್ಲಿ ಲ್ಯಾಂಡ್ ಆಗಿದ್ದರು. ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ನಾಸಾ ಈಗ ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿಗೆ ಖಾಸಗಿ ರಾಕೆಟ್ ಮೂಲಕ ಬಾಹ್ಯಾಕಾಶ ಕೇಂದ್ರಕ್ಕೆ ಗಗನಯಾನಿಗಳನ್ನು ಕಳುಹಿಸಿಕೊಟ್ಟಿದೆ.

2011ರಲ್ಲಿ ನಾಸಾ ಅಭಿವೃದ್ಧಿ ಪಡಿಸಿದ ಬಾಹ್ಯಾಕಾಶ ನೌಕೆ ನಿವೃತ್ತಿಯಾಗಿತ್ತು. ಇದಾದ ಬಳಿಕ ನಾಸಾ ಸ್ಪೇಸ್ ಎಕ್ಸ್ ಮತ್ತು ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಕಂಪನಿಗೆ ಭೂಮಿ‌ ಮತ್ತು ಬಾಹ್ಯಾಕಾಶ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು ರಾಕೆಟ್, ನೌಕೆ ಅಭಿವೃದ್ಧಿ ಪಡಿಸುವಂತೆ 7 ಶತಕೋಟಿ ಡಾಲರ್ ಗುತ್ತಿಗೆ ನೀಡಿತ್ತು.

ಬಾಹಾಕ್ಯಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಸಂಶೋಧನೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಅಮೆರಿಕ ಸರ್ಕಾರದ ನಾಸಾಗೆ ಸಹಕಾರ ನೀಡುತ್ತದೆ.

Comments

Leave a Reply

Your email address will not be published. Required fields are marked *