ಬಾಳೆಹಣ್ಣಿಗೆ ವಿಷಹಾಕಿ 20ಕ್ಕೂ ಹೆಚ್ಚು ಹಸುಗಳನ್ನು ಕೊಂದ ಪಾಪಿಗಳು

ಮಡಿಕೇರಿ: ತೋಟದೊಳಗೆ ಗೋವುಗಳು ಬರುತ್ತಿವೆ ಎಂದು ಪಾಪಿಗಳು ಬಾಳೆಹಣ್ಣಿಗೆ ವಿಷಹಾಕಿ 20ಕ್ಕೂ ಹೆಚ್ಚು ಹಸುಗಳನ್ನು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರಿನ ಡಿಬಿಡಿ ಟಾಟಾ ಎಸ್ಟೇಟ್‍ನಲ್ಲಿ ಈ ಘಟನೆ ನಡೆದಿದ್ದು, ಐಗೂರಿನಲ್ಲಿರುವ ಟಾಟಾ ಎಸ್ಟೇಟ್‍ಗೆ ಸ್ಥಳೀಯ ದನಗಳು ಹೋಗುತ್ತಿದ್ದವಂತೆ. ಹೀಗಾಗಿ ನಿಷ್ಕರುಣೆಯವರಾದ ಎಸ್ಟೇಟ್‍ನ ಮ್ಯಾನೇಜರ್ ಮತ್ತು ಸಿಬ್ಬಂದಿ ಸೇರಿ ಬಾಳೆಹಣ್ಣಿಗೆ ವಿಷ ಹಾಕಿ ಹಸುಗಳಿಗೆ ತಿನಿಸಿ ಕೊಂದಿದ್ದಾರೆ. ಕಳೆದ ಹಲವು ದಿನಗಳಿಂದ 20ಕ್ಕೂ ಹೆಚ್ಚು ಹಸುಗಳಿಗೆ ಇದೇ ರೀತಿ ವಿಷವಿಟ್ಟು ಕೊಂದಿದ್ದಾರೆ.

ಸತ್ತ ಹಸುಗಳನ್ನು ಯಾರಿಗೂ ಅನುಮಾನ ಬಾರದಂತೆ ಎಸ್ಟೇಟ್ ಒಳಗಿನ ದೊಡ್ಡ ಕಂದಕಕ್ಕೆ ಹಾಕಿ ಮರಗಳನ್ನು ಕಡಿದು ಹಾಕಿದ್ದಾರೆ. ಹಸುಗಳು ಕಾಣೆಯಾಗಿದ್ದರಿಂದ ಅನುಮಾನಗೊಂಡ ಗ್ರಾಮದವರು, ಹುಡುಕಾಡಲು ಪ್ರಾರಂಭಿಸಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ.

ಈ ಸುದ್ದಿ ಎಲ್ಲೆಡೆ ಅಬ್ಬುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಹೋಗಿ ಎಸ್ಟೇಟ್ ಮ್ಯಾನೇಜರ್‍ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಎಸ್ಟೇಟ್ ಮ್ಯಾನೇಜರ್ ಹಸುಗಳು ಎಸ್ಟೇಟ್‍ನ ಒಳಗೆ ಸಾವನ್ನಪ್ಪಿದ್ದವು. ನಾವೇ ಗುಂಡಿಗೆ ಹಾಕಿದ್ದೇವೆಂದು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಯಾವಾಗ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜೋರು ಮಾಡಿದರೋ ಆಗ ‘ನಾನು ಇಲ್ಲಿಯವನೇ, ನನ್ನನ್ನು ಹೆದರಿಸೋದು ಬೇಡ ಅಂತ’ ಧಮ್ಕಿ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಜನರು ಮ್ಯಾನೇಜರ್ ವಿರುದ್ಧ ತೀವ್ರ ಗಲಾಟೆ ಮಾಡಿದ್ದಾರೆ. ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಸದ್ಯ ಎಸ್ಟೇಟ್ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮುಗ್ದ ಗೋವುಗಳಿಗೆ ವಿಷವಿಟ್ಟ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *