ಬಾಡಿಗೆ ಮನೆಯ ಲೀಸ್ ಹಣದ ವಿಚಾರ ಜಗಳ – ಇಬ್ಬರ ದುರ್ಮರಣ

ಚಿಕ್ಕಬಳ್ಳಾಪುರ: ಬಾಡಿಗೆ ಮನೆಯ ಲೀಸ್ ಹಣದ ವಿಚಾರದಲ್ಲಿ ಅಣ್ಣ-ತಮ್ಮಂದಿರು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ಶ್ರೀರಾಮ ನಗರದಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಅಂಜಿನಪ್ಪ(45) ಹಾಗೂ ಈತನ ಮಗ ವಿಷ್ಣು(18) ಸಾವನ್ನಪ್ಪಿದ್ದಾನೆ. ಅಂದಹಾಗೆ ಸೀನಪ್ಪ ಹಾಗೂ ಸರೋಜಮ್ಮ ಎಂಬವರಿಗೆ ಅಶ್ವಥ್ ನಾರಾಯಣ್ ಎಂಬ ಹಿರಿ ಮಗ ಹಾಗೂ ಅಂಜಿನಪ್ಪ ಎಂಬ ಕಿರಿ ಮಗ ಸೇರಿ 6 ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು.

ಹಿರಿ ಮಗ ಅಶ್ವಥ್ ನಾರಾಯಣ್ ಶ್ರೀರಾಮನಗರದಲ್ಲಿ ವಾಸವಾಗಿದ್ರೆ, ತಮ್ಮ ಅಂಜಿನಪ್ಪ ಬೆಂಗಳೂರಿನಲ್ಲಿ ವಾಸವಾಗಿದ್ದ. ಇತ್ತ ಇವರ ತಂದೆ-ತಾಯಿ ಚಿಂತಾಮಣಿ ನಗರದಲ್ಲೇ ವಾಸವಾಗಿದ್ರು. ತಂದೆ ಸೀನಪ್ಪ ಸಂಪಾದನೆ ಮಾಡಿ ಕಟ್ಟಿಸಿದ್ದ ಬಾಡಿಗೆ ಮನೆಗಳಿಂದ ಬರುತ್ತಿದ್ದ ಹಣವನ್ನ ಅಶ್ವಥ್ ನಾರಾಯಣ್ ಮಾತ್ರ ಪಡೆದುಕೊಳ್ಳುತ್ತಿದ್ದನಂತೆ. ಬಾಡಿಗೆ ಹಣ ಪಡೆಯುತ್ತಿದ್ದ ಅಶ್ವಥ್‍ನಾರಾಯಣ್ ತಂದೆ-ತಾಯಿಯನ್ನ ಸಹ ಚೆನ್ನಾಗಿ ನೋಡಿ ಕೊಳ್ಳುತ್ತಿರಲಿಲ್ಲವಂತೆ. ಈ ವಿಚಾರವಾಗಿ ನಿನ್ನೆ ಅಣ್ಣ ಅಶ್ವಥ್ ನಾರಾಯಣ್ ಹಾಗೂ ತಮ್ಮ ಅಂಜಿನಪ್ಪ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದಾರೆ.

ತಡರಾತ್ರಿ ಇದೇ ವಿಚಾರವಾಗಿ ಅಶ್ವಥ್ ನಾರಾಯಣ್ ಹಾಗೂ ವಿಷ್ಣು, ಅಂಜಿನಪ್ಪ ಜೊತೆ ಮಾತನಾಡೋಕೆ ಅಂತ ತಾಯಿ ಸರೋಜಮ್ಮ ಮನೆ ಬಳಿ ತೆರಳಿದ್ರು. ಈ ವೇಳೆ ಮಾತಿಗೆ ಮಾತು ಬೆಳೆದು ಮಚ್ಚು, ಚಾಕುವಿನಿಂದ ಬಡಿದಾಡಿಕೊಂಡಿದ್ದಾರೆ. ಪರಿಣಾಮ ಅಂಜಿನಪ್ಪ ಹಾಗೂ ವಿಷ್ಣು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅಶ್ವಥ್ ನಾರಾಯಣ್ ಸಹ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಅಂಜಿನಪ್ಪಗೆ ಮೂರು ಜನ ಗಂಡು ಮಕ್ಕಳಿದ್ರು. ಅಶ್ವಥ್ ನಾರಾಯಣ್ ಗೆ ಮೂರು ಜನ ಹೆಣ್ಣು ಮಕ್ಕಳು. ಹೀಗಾಗಿ ಅಂಜಿನಪ್ಪನ ಮಗ ವಿಷ್ಣು ಎಂಬಾತನನ್ನ ಹುಟ್ಟಿದಾಗಲೇ ಅಶ್ವಥ್ ನಾರಾಯಣ್ ದತ್ತು ಪಡೆದುಕೊಂಡಿದ್ರು.

ಸದ್ಯ ಚಿಂತಾಮಣಿ ನಗರ ಠಾಣೆಯಲ್ಲಿ ಪರ ವಿರೋಧ ಪ್ರಕರಣಗಳು ದಾಖಲಾಗಿವೆ.

Comments

Leave a Reply

Your email address will not be published. Required fields are marked *