ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಹೆಚ್ಚುತ್ತಲೇ ಇದ್ದು, ಘಟಪ್ರಭಾ ನದಿಯ ಅಬ್ಬರಕ್ಕೆ ಜಿಲ್ಲೆಯ ಮತ್ತೊಂದು ಗ್ರಾಮ ಮುಳುಗಡೆಯಾಗಿದೆ.

ಘಟಪ್ರಭಾ ನದಿಯ ಪ್ರವಾಹಕ್ಕೆ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾದರೆ, ಇನ್ನೂ ಹಲವು ಗ್ರಾಮಗಳು ಮುಳುಗಡೆಯಾಗಿವೆ. ಮುಧೋಳ ತಾಲೂಕಿನ ಹತ್ತಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗಿದ್ದು, ಸಾವಿರಾರು ಎಕರೆ ಕಬ್ಬು ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ನಿಂತು ನಾಶವಾಗಿದೆ. ಇದೀಗ ತಾಲೂಕಿನ ಮಿರ್ಜಿಗ್ರಾಮಕ್ಕೆ ಘಟಪ್ರಭೆ ಎಂಟ್ರಿಕೊಟ್ಟಿದ್ದು, ಗ್ರಾಮದ 25 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಜಲಾವೃತವಾದ ಮನೆಗಳ ಕುಟುಂಬಸ್ಥರನ್ನು ತಾಲೂಕು ಆಡಳಿತ ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಿದೆ.

ಮಿರ್ಜಿ ಮತ್ತು ಮಲ್ಲಾಪುರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಈಗಾಗಲೇ ಮುಳುಗಡೆಯಾಗಿದ್ದು, ಇದೀಗ ಭಾರೀ ಪ್ರಮಾಣದಲ್ಲಿ ಮನೆಗಳು ಮುಳುಗಡೆಯಾಗಿವೆ. ಬಹುತೇಕ ಮನೆಗಳ ಬಳಿ 4 ಅಡಿಗಳಷ್ಟು ನೀರು ನಿಂತಿದ್ದು, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಮಳೆ ಕಡಿಮೆಯಾದರೂ ಪ್ರವಾಹ ಮಾತ್ರ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕಡಿಮೆಯಾಗುತ್ತಿಲ್ಲ. ಹೀಗಾಗಿ ಜನ ಪರದಾಡುವಂತಾಗಿದೆ.

Leave a Reply