ಬಾಗಲಕೋಟೆಯಲ್ಲಿ ಕೊರೊನಾಗೆ ಇಂದು ಮೂವರು ಬಲಿ

– ಸೋಂಕಿತರ ಸಂಖ್ಯೆ 392ಕ್ಕೆ ಏರಿಕೆ

ಬಾಗಲಕೋಟೆ: ಕೊರೊನಾ ಮಹಾಮಾರಿಗೆ ಜಿಲ್ಲೆಯಲ್ಲಿ ಇಂದು ಒಟ್ಟು ಮೂವರು ಬಲಿಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ 44 ವರ್ಷದ ವ್ಯಕ್ತಿ ಮೃತರಾಗಿದ್ದು, ರೋಗಿ ನಂ.8300 ಸಂಪರ್ಕದಿಂದಾಗಿ ಇವರಿಗೆ ಸೋಂಕು ತಗುಲಿತ್ತು. ಬಾಗಲಕೋಟೆ ನವನಗರದ 28 ಸೆಕ್ಟರ್ ನಿವಾಸಿ, 77 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಈ ಇಬ್ಬರು ಸೋಂಕಿತರು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಬಿಪಿ, ಡಯಾಬಿಟಿಸ್‍ಗೆ ತುತ್ತಾಗಿದ್ದರು. ಜೂನ್ 10ರಂದು ತೀವ್ರ ಉಸಿರಾಟ ತೊಂದರೆ ಎಂದು ಕೊವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಅಲ್ಲದೆ ವಿಜಯಪುರ ಜಿಲ್ಲೆಯ ವ್ಯಕ್ತಿ ಬಾಗಲಕೋಟೆ ಕೋವಿಡ್-19 ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವಿಜಯಪುರ ಜಿಲ್ಲೆಯ ಬಸನಬಾಗೇವಾಡಿ ತಾಲೂಕಿನ ಕೋರ್ತಿ ಕೋಲ್ಹಾರ ಪಟ್ಟಣದ 78 ವಯಸ್ಸಿನ ವೃದ್ಧ ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆಯಿಂದ ಬಾಗಲಕೋಟೆ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಮೂವರ ಸಾವಿನ ಮೂಲಕ ಜಿಲ್ಲೆಯಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಈ ವರೆಗೆ 392 ಜನರಿಗೆ ಸೋಂಕು ತಗುಲಿದ್ದು, ಇದರಲ್ಲಿ 180 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 13 ಜನ ಸಾವನ್ನಪ್ಪಿದ್ದಾರೆ. ಇನ್ನೂ 172 ಸಕ್ರಿಯ ಪ್ರಕರಣಗಳಿವೆ.

Comments

Leave a Reply

Your email address will not be published. Required fields are marked *