ಬಹುಮತ ಇಲ್ಲದಿದ್ರೂ ಜೆಡಿಎಸ್‍ಗೆ ಮೈಸೂರು ಪಾಲಿಕೆಯ ಗದ್ದುಗೆ

– ಬಿಜೆಪಿಗೆ ಅಚ್ಚರಿಯ ಆಘಾತ ನೀಡಿದ ಕಾಂಗ್ರೆಸ್
– ಅಂತರ ಕಾಯ್ದುಕೊಂಡಿದ್ದ ಜೆಡಿಎಸ್

ಮೈಸೂರು: ಇಂದು ಬೆಳಗ್ಗೆಯಿಂದಲೂ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದ ಮೈಸೂರು ಮೇಯರ್ ಚುನಾವಣೆ ಅಚ್ಚರಿಯೊಂದಿಗೆ ಅಂತ್ಯವಾಗಿದೆ. ಜೆಡಿಎಸ್ ಗೆ ಮೇಯರ್ ಪಟ್ಟ ಒಲಿದಿದ್ದು, ಕಾಂಗ್ರೆಸ್ ದಳದ ಅಭ್ಯರ್ಥಿಗೆ ಬೆಂಬಲ ನೀಡಿತು. ಹಾಗಾಗಿ ಜೆಡಿಎಸ್ ರುಕ್ಮಿಣಿ ಮಾದೇಗೌಡ ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೇಯರ್ ಚುನಾವಣೆ ಹಿನ್ನೆಲೆ ಮಾಜಿ ಸಿಎಂ ಕುಮಾರಸ್ವಾಮಿ ಮೈಸೂರಿನಲ್ಲಿಯೇ ಉಳಿದುಕೊಂಡಿದ್ದರು. ಮಂಗಳವಾರ ಸಂಜೆ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರನ್ನ ಭೇಟಿಯಾಗಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇತ್ತ ಕಾಂಗ್ರೆಸ್ ಮಾಜಿ ಶಾಸಕ ತನ್ವೀರ್ ಸೇಠ್ ಹಳೆ ಮೈತ್ರಿಯನ್ನ ಮುಂದುವರಿಸುವಂತೆ ಹೇಳಿದ್ದರು. ಆದ್ರೆ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಮೈತ್ರಿಗೆ ಮುಂದಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನ ಸಂಪರ್ಕಿಸಿ ಬೆಂಬಲ ಕೇಳಿದ್ದರು ಎನ್ನಲಾಗಿದೆ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ್ರೆ ಕೇರಳ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವಂತೆ ದೇವೇಗೌಡರು ಸಂದೇಶ ರವಾನಿಸಿದ್ದರು. ಹಾಗಾಗಿ ಜೆಡಿಎಸ್ ಮ್ಯಾಜಿಕ್ ನಂಬರ್ ಇಲ್ಲದಿದ್ದರೂ ರುಕ್ಮಿಣಿ ಮಾದೇಗೌಡರನ್ನ ಕಣಕ್ಕಿಳಿಸಿತ್ತು ಎಂದು ತಿಳಿದು ಬಂದಿದೆ.

ಇತ್ತ ಕಾಂಗ್ರೆಸ್, ಬಿಜೆಪಿ ಸಹ ಅಭ್ಯರ್ಥಿಗಳು ಸಹ ನಾಮಪತ್ರ ಸಲ್ಲಿಕೆ ಮಾಡಿದ್ದರು. ಹೆಚ್ಚು ಮತಗಳಿದ್ದ ಹಿನ್ನೆಲೆ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಸಿದ್ಧತೆ ಮಾಡಿಕೊಂಡಿತ್ತು. ಜೆಡಿಎಸ್ ಬೆಂಬಲ ಕೇಳದಿದ್ದರೂ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ರುಕ್ಮಿಣಿ ಮಾದೇಗೌಡರಿಗೆ ಬೆಂಬಲ ಸೂಚಿಸುವ ಮೂಲಕ ಬಿಜೆಪಿಗೆ ಅಚ್ಚರಿಗೆ ಆಘಾತ ನೀಡಿತು.

Comments

Leave a Reply

Your email address will not be published. Required fields are marked *