ಬಸ್ ಸಂಚಾರ ಪುನರಾರಂಭಕ್ಕೆ ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಸಿದ್ಧತೆಗಳು ಪೂರ್ಣ

ಹುಬ್ಬಳ್ಳಿ: ಬಸ್ ಸಂಚಾರ ಪುನರಾರಂಭಕ್ಕೆ ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.

ಬಸ್ ಸಂಚಾರ ಪುನರಾರಂಭಿಸಲು ರಾಜ್ಯ ಸರ್ಕಾರದಿಂದ ನಿರ್ದೇಶನಗಳು ಬಂದ ನಂತರ ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಬಸ್ಸುಗಳನ್ನು ರಸ್ತೆ ಗಿಳಿಸಲು ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಭಾಗದಲ್ಲಿ 2166 ಸಿಬ್ಬಂದಿಗಳಿದ್ದು ಎಲ್ಲರಿಗೂ ಕರ್ತವ್ಯಕ್ಕೆ ಸಿದ್ಧರಾಗಿರುವಂತೆ ಸೂಚಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.

ಈಗಾಗಲೇ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಮತ್ತು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಒಂದೇ ಪ್ರವೇಶ ಹಾಗೂ ಒಂದೇ ನಿರ್ಗಮನ ವ್ಯವಸ್ಥೆ, ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ಉಷ್ಣತೆ ಪರೀಕ್ಷೆ, ಸ್ಯಾನಿಟೈಸರ್, ಮಾಸ್ಕ್ ಧರಿಸಿರುವ ಬಗ್ಗೆ ಪರಿಶೀಲನೆ ಮಾಡಲು ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಈ ಎಲ್ಲ ಪ್ರಕ್ರಿಯೆಗಳ ಸುಗಮ ನಿರ್ವಹಣೆಗಾಗಿ ಮೂರು ಪಾಳಿಯಲ್ಲಿ ಸಿಬ್ಬಂದಿ ಮತ್ತು ಮೇಲ್ವಿಚಾರಣೆಗಾಗಿ ಪ್ರತಿ ಬಸ್ ನಿಲ್ದಾಣಕ್ಕೂ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದೆ.

ವಿಭಾಗದಲ್ಲಿ 462 ಬಸ್ಸುಗಳಿದ್ದು, ಲಾಕ್‍ಡೌನ್ ಪೂರ್ವದಲ್ಲಿ ಜಿಲ್ಲೆಯೊಳಗಡೆ, ಅಂತರ ಜಿಲ್ಲೆಗಳು ಮತ್ತು ಅಂತರರಾಜ್ಯಗಳ ಪ್ರದೇಶಗಳಲ್ಲಿ ಸಾಮಾನ್ಯ, ವೇಗಧೂತ, ತಡೆರಹಿತ, ರಾಜಹಂಸ, ಹವಾನಿಯಂತ್ರಣರಹಿತ ಸ್ಲೀಪರ್, ಹವಾನಿಯಂತ್ರಣ ಸಹಿತ ಸ್ಲೀಪರ್ ಮತ್ತು ವೋಲ್ವೊ ಮಾದರಿ ಬಸ್ಸಗಳು ಸೇರಿದಂತೆ ಒಟ್ಟು 419 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿತ್ತು.

ಸರ್ಕಾರದ ನಿರ್ದೇಶನಗಳು ಬಂದ ನಂತರ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಯಾವ ಮಾದರಿಯ ಬಸ್ಸುಗಳನ್ನು ಕಾರ್ಯಾಚರಣೆ ಮಾಡಬೇಕು? ಯಾವ ಮಾರ್ಗಗಳಲ್ಲಿ ಎಷ್ಟು ಬಸ್ಸುಗಳನ್ನು ರಸ್ತೆಗಿಳಿಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *