ಬಸ್ ಬಂದರೂ ಜನ ಬರುತ್ತಿಲ್ಲ

– ಉಡುಪಿಯಲ್ಲಿ ಇಂದಿನಿಂದ ಸರ್ಕಾರಿ, ಖಾಸಗಿ ಬಸ್ ಓಡಾಟ

ಉಡುಪಿ: ಜಿಲ್ಲೆಯೊಳಗೆ ಇಂದಿನಿಂದ ಖಾಸಗಿ ಸರ್ಕಾರಿ ಬಸ್‍ಗಳು ಓಡಾಡುತ್ತಿವೆ. ಕುಂದಾಪುರ ರೂಟ್‍ನಲ್ಲಿ ಪ್ರತಿ ಅರ್ಧಗಂಟೆಗೊಂದು ಬಸ್, ಉಡುಪಿ-ಮಣಿಪಾಲ ನಗರದಲ್ಲಿ ನರ್ಮ್ ಬಸ್ ಸಂಚಾರ ಆರಂಭವಾಗಿದೆ.

ಉಡುಪಿ ಜಿಲ್ಲೆಯನ್ನು ಕೇಂದ್ರ ಸರ್ಕಾರ ಗ್ರೀನ್ ಝೋನ್ ಎಂದು ಘೋಷಿಸಿದೆ. ನಿರ್ಬಂಧಿತ ವಿನಾಯಿತಿಗಳು ಜಿಲ್ಲೆಗೆ ಸಿಕ್ಕಿದೆ. ಹೀಗಾಗಿ ಜಿಲ್ಲೆಯ ಒಳಗೆ ಖಾಸಗಿ ಮತ್ತು ಸರ್ಕಾರಿ ಬಸ್‍ಗಳ ಓಡಾಟ ಆರಂಭಿಸಬಹುದು ಎಂದು ಜಿಲ್ಲಾಡಳಿತ ಹೇಳಿತ್ತು. ಬೆರಳೆಣಿಕೆಯ ಬಸ್‍ಗಳು ಮಾತ್ರ ಇಂದು ರಸ್ತೆಗೆ ಇಳಿದಿವೆ. ಆದರೆ ಜನ ಮಾತ್ರ ನಗರಗಳತ್ತ ಮುಖ ಮಾಡುತ್ತಿಲ್ಲ.

ಭಾರತಿ ಕಂಪೆನಿ ಉಡುಪಿ ಕುಂದಾಪುರ ರೂಟ್‍ನಲ್ಲಿ ಬಸ್ ಓಡಲು ಆರಂಭಿಸಿದೆ. ಪ್ರತಿ ಇಪ್ಪತ್ತು ನಿಮಿಷಕ್ಕೊಂದು ಬಸ್ ಅನ್ನು ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಓಡಿಸಲಾಗುತ್ತಿದೆ. ಆದರೆ ಬಸ್ಸಿನ ಒಳಗೆ ಪ್ರಯಾಣಿಕರು ಮಾತ್ರ ಬೆರಳೆಣಿಕೆಯಲ್ಲಿ ಇದ್ದದ್ದು ಕಂಡು ಬಂತು. ಪ್ರಯಾಣಿಕರು ಬಸ್ ಹತ್ತುವಾಗ ಸ್ಯಾನಿಟೈಸರ್ ಒಂದು ಸೀಟ್‍ನಲ್ಲಿ ಒಬ್ಬರು ಮಾತ್ರ ಕುಳಿತುಕೊಳ್ಳುವಂತೆ ನಿರ್ವಾಹಕರು ಸೂಚನೆಗಳನ್ನು ಕೊಡುತ್ತಿದ್ದಾರೆ.

ಪ್ರಯಾಣಿಕ ಸುದೇಶ್ ಕುಮಾರ್ ಮಾತನಾಡಿ, ಇಷ್ಟು ದಿನ ನಾನು ಖಾಸಗಿ ವಾಹನದಲ್ಲಿ ಓಡಾಡುತ್ತಿದ್ದೆ. ಇದೀಗ ಬಸ್ ಆರಂಭಿಸಿದ್ದು ಬಹಳ ಉಪಯುಕ್ತ ಆಗಿದೆ. ಜನ ಕಮ್ಮಿ ಇದ್ದಾರೆ. ಇವತ್ತು ಎಲ್ಲರಿಗೂ ಮಾಹಿತಿ ಹೋಗಿರಬಹುದು. ನಾಳೆ ಜನ ಬಸ್‍ನಲ್ಲಿ ಓಡಾಡಬಹುದು ಎಂದರು.

ಭಾರತಿ ಬಸ್ ಚಾಲಕ ಶ್ರೇಯಸ್ ಮೊಗವೀರ ಮಾತನಾಡಿ, ನಮಗೆ ಹಲವಾರು ಸೂಚನೆಗಳನ್ನು ಕೊಟ್ಟಿದ್ದಾರೆ. ಪ್ರಯಾಣಿಕರು ಮಾಸ್ಕ್ ಧರಿಸುವಂತೆ ನಿಗಾ ಇಡಬೇಕಾಗಿದೆ. ಬಸ್ ಹತ್ತುವಾಗ ಪ್ರಯಾಣಿಕರಿಗೆ ಹ್ಯಾಂಡ್ ಸ್ಯಾನಿಟೈಸರ್ ಕೊಡುತ್ತೇವೆ. ಸಾರ್ವಜನಿಕರಿಗೆ ಉಪಯೋಗವಾಗಲಿ ಅಂತ ಮಾಲೀಕರು ಬಸ್ ಓಡಿಸುತ್ತಿದ್ದಾರೆ. ಟೋಲ್ ನಮ್ಮ ಸಂಬಳ ಖರ್ಚು ಎಲ್ಲವನ್ನೂ ಲೆಕ್ಕ ಹಾಕುವಾಗ ಬಹಳಷ್ಟು ನಷ್ಟವಾಗುತ್ತದೆ ಎಂದು ಹೇಳಿದರು.

ಉಡುಪಿ ನಗರ ಮತ್ತು ಮಣಿಪಾಲದ ನಡುವೆ ನರ್ಮ್ ಬಸ್‍ಗಳು ಓಡಾಡುತ್ತಿವೆ. ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಜನರಿಗೆ ಉಪಯೋಗವಾಗಲಿ ಅಂತ ಸರ್ಕಾರಿ ಬಸ್ ಗಳನ್ನು ಓಡಿಸಲಾಗುತ್ತಿದೆ. ಲಾಕ್‍ಡೌನ್ ಸಂಪೂರ್ಣವಾಗಿ ತೆರವಾದ ಮೇಲೆ ಜನರು ದೈನಂದಿನ ಓಡಾಟ ಆರಂಭಿಸಿದ ನಂತರ ಜೂನ್ ತಿಂಗಳಲ್ಲಿ ಸಿಟಿ ಬಸ್ ಓಡಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

Comments

Leave a Reply

Your email address will not be published. Required fields are marked *