ಬಸ್ಸನ್ನು ನೀವು ಓಡಿಸಿ, ಇಲ್ಲ ನಮಗೆ ಬಿಡಿ – ಸರ್ಕಾರಕ್ಕೆ ಖಾಸಗಿ ಬಸ್ ಮಾಲೀಕರ ಆಗ್ರಹ

ಚಿಕ್ಕಮಗಳೂರು: ಒಂದೋ ನೀವೇ ಬಸ್ ಓಡಿಸಿಕೊಳ್ಳಿ ಇಲ್ಲ, ನಮಗೆ ಬಿಡಿ. ಹೀಗೆ ನಿಮಗೆ ಬೇಕಾದಾಗ ಒಂದೊಂದೇ ಬಸ್ ತಂದು ಬಿಟ್ಟುಕೊಂಡರೆ ನಮಗೆ ನಷ್ಟವಾಗುತ್ತೆ ಎಂದು ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಡೆದಿದೆ.

ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿರುವ ಸಾರಿಗೆ ನೌಕಕರು ಬಸ್‍ಗಳನ್ನು ತೆಗೆಯದ ಕಾರಣ ಸರ್ಕಾರ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಖಾಸಗಿ ಬಸ್ ಹಾಗೂ ಟ್ಯಾಕ್ಸಿಗಳು ಸಾರ್ವಜನಿಕ ಸೇವೆಗೆ ಮುಂದಾಗಿತ್ತು. ಆದರೆ ದಿನಕಳೆದಂತೆ ಒಬ್ಬೊಬ್ಬ ಡ್ರೈವರ್-ಕಂಡೆಕ್ಟರ್‍ಗಳು ಸೇವೆಗೆ ಬರುತ್ತಿರುವುದರಿಂದ ಒಂದೊಂದೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ರಸ್ತೆಗೆ ಇಳಿಯುತ್ತಿವೆ. ಇದು ಖಾಸಗಿ ಬಸ್ ಮಾಲೀಕರು-ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೋ ನೀವೇ ಬಸ್ ಓಡಿಸಿಕೊಳ್ಳಿ. ಇಲ್ಲ ನಮಗೆ ಬಿಡಿ ಎಂದು ಖಾಸಗಿ ಬಸ್ ಚಾಲಕರು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಸಿದ್ದಾರೆ.

ನಾವು ಯಾರ ಬಳಿಯೂ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿಲ್ಲ. ಸರ್ಕಾರದ ದರ ನಿಗದಿಯಂತೆ ಸಾರ್ವಜನಿಕರ ಸೇವೆಗೆ ಬಂದಿದ್ದೇವೆ. ಇಡೀ ರಾತ್ರಿ ಸೊಳ್ಳೆಯಿಂದ ಕಚ್ಚಿಸಿಕೊಂಡು ಕ್ಯೂನಲ್ಲಿ ನಿಂತು ಬೆಳಗ್ಗೆ ಬಸ್ ಓಡಿಸುವವರು ನಾವು. ನೀವು ಡ್ರೈವರ್-ಕಂಡೆಕ್ಟರ್ ಬಂದ ಕೂಡಲೇ ಬಸ್ ತಂದರೆ ನಮಗೆ ಕಷ್ಟ ಹಾಗೂ ನಷ್ಟವಾಗುತ್ತದೆ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಹೋಗುವಾಗ ಜನ ಕರೆದುಕೊಂಡು ಹೋಗಿ ಬರುವಾಗ ಖಾಲಿ ಬಸ್ ಬರುತ್ತಿದೆ. ಡಿಸೇಲ್ ದರ ಸೇರಿದಂತೆ ಇತರೇ ಖರ್ಚುಗಳಿಂದ ಏನೂ ಉಳಿಯುತ್ತಿಲ್ಲ. ಅಧಿಕಾರಿಗಳು ಹೇಳಿರುವುದರಿಂದ ನಾವು ಬಂದಿರುವುದು, ನೀವು ಹೀಗೆ ಮಾಡೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

Comments

Leave a Reply

Your email address will not be published. Required fields are marked *