ಬಳ್ಳಾರಿಯ 21 MBBS ವಿದ್ಯಾರ್ಥಿಗಳಿಗೆ ಕೊರೊನಾ – ಬಾಗಲಕೋಟೆಯ ಒಂದೇ ಕುಟುಂಬದ ಐವರಿಗೆ ಸೋಂಕು

– ತೆಲಂಗಾಣದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಮತ್ತೊಮ್ಮೆ ಅಟ್ಟಹಾಸ ಮೆರೆದಿದೆ. ಬಳ್ಳಾರಿಯ ವಿಮ್ಸ್ ಕಾಲೇಜ್‍ನ 7 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈವರೆಗೆ ಒಟ್ಟು 21 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ವಿಮ್ಸ್ ಕಾಲೇಜ್‍ನ ಸಂತೋಷ ಹಾಸ್ಟೆಲ್ ಅನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿದೆ. ಸೋಂಕು ತಗಲಿರುವ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ.

ಬಾಗಲಕೋಟೆಯಲ್ಲಿ ಕಿಲ್ಲರ್ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಮಾರವಾಡಿ ಗಲ್ಲಿಯ ಒಂದೇ ಕುಟುಂಬದ ಐದು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಐದು ಮಂದಿ ಮಹಾರಾಷ್ಟ್ರದ ಸಾಂಗ್ಲಿಗೆ ಹೋಗಿ ಬಂದಿರುವುದಾಗಿ ಟ್ರಾವೆಲ್ ಹಿಸ್ಟರಿಯಿಂದ ತಿಳಿದು ಬಂದಿದೆ. ಇನ್ನೂ ಈ ಕುಟುಂಬವಿರೋ ಪ್ರದೇಶವನ್ನು ಮೈಕ್ರೋ ಕಂಟೈನ್‍ಮೆಂಟ್ ಅಂತಾ ಗುರುತು ಮಾಡಲಾಗಿದ್ದು, ಬ್ಯಾರಿಕೇಡ್ ಹಾಕಿ ಇಡೀ ಸ್ಥಳವನ್ನು ಬಂದ್ ಮಾಡಲಾಗಿದೆ.

ಕೊಪ್ಪಳ ನಗರದಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 6 ದಿನಗಳ ಹಿಂದೆ ಆಂಧ್ರದ ಕೃಷ್ಣಾ ಜಿಲ್ಲೆಯಿಂದ ಬಂದಿರುವ ಕೂಲಿ ಕಾರ್ಮಿಕನ ಆರೋಗ್ಯ ಏರುಪೇರಾಗಿತ್ತು. ಬಳಿಕ ಆರೋಗ್ಯ ತಪಾಸಣೆ ಬಳಿಕ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತನ ಸಂಪರ್ಕದಲ್ಲಿ ನೂರಾರು ಕಾರ್ಮಿಕರಿದ್ದು ಅವರೆಲ್ಲರಿಗೂ ಈಗ ಆತಂಕ ಶುರುವಾಗಿದೆ. ಈ ಕಟ್ಟಡದಲ್ಲಿ 360 ಕಾರ್ಮಿಕರು ಕೆಲಸ ಮಾಡ್ತಿದ್ದು, ಆರೋಗ್ಯ ಇಲಾಖೆಗೆ ಆತಂಕ ಶುರುವಾಗಿದೆ. ಹೀಗಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಡಿಎಚ್‍ಓ ಡಾ. ಅಲಕನಂದಾ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿ ಕಾರ್ಮಿಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಎಲ್ಲಾ ಕಾರ್ಮಿಕರಿಗೂ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.

ದೇಶದೆಲ್ಲೆಡೆ ಕೊರೊನಾ ಸೋಂಕಿನ 2ನೇ ಅಲೆ ಶುರುವಾಗಿದ್ದು, ಮುಂಜಾಗ್ರತಾ ಕ್ರವiವಾಗಿ ತೆಲಂಗಾಣ ಸರ್ಕಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಈ ಮೂಲಕ ಇಂದಿನಿಂದಲೇ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ವಿದ್ಯಾರ್ಥಿಗಳಿಗೆ ಭವಿಷ್ಯಕ್ಕಾಗಿ ಆನ್‍ಲೈನ್ ಕ್ಲಾಸ್ ನಡೆಸಬೇಕು ಹಾಗೂ ಮುಂದಿನ ಆದೇಶದವರೆಗೆ ಯಾವುದೇ ಕಾರಣಕ್ಕೂ ಶಾಲಾ-ಕಾಲೇಜುಗಳು, ಹಾಸ್ಟೆಲ್‍ಗಳು ಮತ್ತು ಗುರುಕುಲಗಳನ್ನು ತೆರೆಯುವಂತಿಲ್ಲ ಎಂದು ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರ ರೆಡ್ಡಿ ತಿಳಿಸಿದ್ದಾರೆ.

 

Comments

Leave a Reply

Your email address will not be published. Required fields are marked *