ಬಳ್ಳಾರಿಯಲ್ಲಿ ಏಕಕಾಲಕ್ಕೆ ನಡೆಯಬೇಕಿದ್ದ 8 ಬಾಲ್ಯ ವಿವಾಹಕ್ಕೆ ಬ್ರೇಕ್

ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿಯಲ್ಲಿ ನಾನಾ ಕಡೆಗಳಲ್ಲಿ ಏಕಕಾಲಕ್ಕೆ ನಡೆಯಬೇಕಿದ್ದ ಎಂಟು ಬಾಲ್ಯ ವಿವಾಹಗಳನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ತಡೆಹಿಡಿದಿದ್ದಾರೆ.

ಜಿಲ್ಲಾ ಮಕ್ಕಳ ಸಹಾಯವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ ಶನಿವಾರ-ಭಾನುವಾರ ಎರಡು ದಿನಗಳ ಕಾಲ ದಾಳಿ ನಡೆಸಿ ಬಾಲ್ಯ ವಿವಾಹಗಳನ್ನು ತಡೆ ಹಿಡಿಯಲಾಗಿದೆ. ಬಳ್ಳಾರಿ ತಾಲೂಕಿನ ರೂಪನಗುಡಿಯಲ್ಲಿ 2, ಕಪ್ಪಗಲ್ಲು, ಸಿರವಾರ, ವದ್ದಟ್ಟಿ, ಕೊಳಗಲ್ಲು ಗ್ರಾಮಗಳಲ್ಲಿ ತಲಾ ಒಂದೊಂದು ಹಾಗೂ ಸಿರುಗುಪ್ಪ ತಾಲೂಕಿನ ತೊಂಡೆಹಾಳ್ ಗ್ರಾಮದ ಬಾಲಕ- ಬಾಲಕಿಯೊಂದಿಗೆ ನಡೆಯಬೇಕಿದ್ದ ಬಾಲ್ಯ ವಿವಾಹಗಳನ್ನ ತಡೆದ ಅಧಿಕಾರಿಗಳ ತಂಡ, ಅವರ ಪೋಷಕರಿಂದ ಮುಚ್ಚಳಿಕೆ ಪತ್ರಗಳನ್ನು ಬರೆಸಿಕೊಂಡಿದ್ದಾರೆ.

ಪೋಷಕರ ವಿರುದ್ಧ ಪ್ರತ್ಯೇಕವಾಗಿ ನಾಲ್ಕು ಪ್ರಕರಣಗಳು ದಾಖಲಿಸಲಾಗಿದೆ. ಬಳ್ಳಾರಿ ಗ್ರಾಮಾಂತರ ಸಿಡಿಪಿಒ ಉಷಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದ್ ಪಾಷಾ, ಸಿಬ್ಬಂದಿಯಾದ ರಾಜಾನಾಯ್ಕ, ಈಶ್ವರ್ ರಾವ್, ಉಮೇಶ್, ಜ್ಯೋತಿ, ನಾಗುಬಾಯಿ ನೇತೃತ್ವದ ಪೊಲೀಸ್ ಅಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಂಡವು ಈ ದಾಳಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಆರ್.ನಾಗರಾಜ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *