ಬಳ್ಳಾರಿಯಲ್ಲಿ ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡಿದವರ ವಿರುದ್ಧ ಕ್ರಮವಿಲ್ಲ ಏಕೆ?: ಯು.ಟಿ.ಖಾದರ್

– ‘ಆರೋಗ್ಯ ಸಚಿವರ ಜಿಲ್ಲೆ ಎಂದು ರಿಯಾಯಿತಿ ನೀಡಲಾಗಿದ್ಯಾ..?’

ಮಂಗಳೂರು: ಬಳ್ಳಾರಿಯಲ್ಲಿ ಕೋವಿಡ್-19 ಸೋಂಕಿತರ ಅಮಾನವೀಯ ಅಂತ್ಯಸಂಸ್ಕಾರ ನಡೆಸಿ ಅಮಾನವೀಯವಾಗಿ ನಡೆದುಕೊಂಡ ಅಧಿಕಾರಿಗಳ ಮೇಲೆ ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ. ಅದು ಆರೋಗ್ಯ ಸಚಿವರ ಜಿಲ್ಲೆ ಎಂದು ರಿಯಾಯಿತಿ ಕೊಡಲಾಗಿದ್ಯಾ ಎಂದು ಶಾಸಕ, ಮಾಜಿ ಆರೋಗ್ಯ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಬಳ್ಳಾರಿ ಪ್ರಕರಣದ ಕುರಿತು ರಾಜ್ಯ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಅಲ್ಲದೇ ಮುಂದಿನ ದಿನದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಅಂಬುಲೆನ್ಸ್ ಸೇವೆ ಇಲ್ಲ. ಜೊತೆಗೆ ಎಲ್ಲಾ ಧರ್ಮದವರಿಗೂ ಸರಿಯಾದ ಅಂತ್ಯಕ್ರಿಯೆ ಮಾಡಲು ಸರ್ಕಾರ ಸ್ಥಳ ಗುರುತಿಸಬೇಕು ಎಂದು ಅವರು ಆಗ್ರಹಿಸಿದರು.

ಏನಿದು ಪ್ರಕರಣ?
ಸೋಮವಾರ ಒಂದೇ ದಿನ ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾಗೆ 9 ಜನ ಸಾವನ್ನಪ್ಪಿದ್ದರು. ಇವರ ಮೃತ ದೇಹವನ್ನು ಅಮಾನವೀಯವಾಗಿ ಬೇಕಾಬಿಟ್ಟಿಯಾಗಿ ಗುಂಡಿಗೆ ಎಸೆದು ಮಣ್ಣು ಮಾಡಲಾಗಿತ್ತು. ಈ ದೃಶ್ಯವನ್ನು ಕಂಡರೆ ಎಂಥವರಿಗೂ ಕರುಳು ಹಿಂಡುವಂತಿತ್ತು. ಒಂದೇ ಬಾರಿ ಶವ ಸಂಸ್ಕಾರ ಮಾಡಬೇಕಾದರೆ ಆರೋಗ್ಯ ಇಲಾಖೆಯ ಸಿಬ್ಬಂದಿ ಶವವನ್ನು ಮೇಲಿಂದ ಎಸೆದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವಿಡಿಯೋ ವೈರಲ್ ಆಗಿತ್ತು. ಅಲ್ಲದೆ ಆಕ್ರೋಶ ಸಹ ವ್ಯಕ್ತವಾಗಿತ್ತು.

ಜಿಲ್ಲಾಧಿಕಾರಿ ಕ್ಷಮೆ: ಪ್ರಕರಣದ ಕುರಿತು ತನಿಖೆ ನಡೆಸುವಂತೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿಸಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದರು. ಅಲ್ಲದೇ ಕ್ಷಮೆ ಕೋರಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದ ಸಚಿವ ಆರ್.ಸುಧಾಕರ್ ಅವರು, ಮೃತದೇಹಗಳ ಅಂತ್ಯಸಂಸ್ಕಾರ ವೇಳೆ ನಿರ್ಲಕ್ಷ್ಯ ವಹಿಸಿದ್ದ ಘಟನೆ ಕುರಿತು ಮಾಹಿತಿ ಪಡೆದುಕೊಂಡು ಕ್ರಮಕೈಗೊಳ್ಳಲಾಗಿದೆ. ಅಂತ್ಯಸಂಸ್ಕಾರ ನಡೆಸಿದ್ದ ಎಲ್ಲ ಸಿಬ್ಬಂದಿಯನ್ನು ಅಮಾನತು ಮಾಡಲಾಗುತ್ತದೆ.

ಜುಲೈ 2 ರಂದು ಬಳ್ಳಾರಿಯ ಹೊಸಪೇಟೆ ತಾಲೂಕು ಆಸ್ಪತ್ರೆಯಲ್ಲೂ ಓರ್ವ ಸೋಂಕಿತ ಮೃತಪಟ್ಟಿದ್ದರು. ಆದರೆ ಮೃತರ ಶವವನ್ನು ಆಸ್ಪತ್ರೆಯ ಆವರಣದಲ್ಲಿ ಮಳೆಯಲ್ಲಿ ನೆನಯಲು ಬಿಟ್ಟು ಸಿಬ್ಬಂದಿ ಎಡವಟ್ಟು ಮಾಡಿದ್ದರು. ಪಿಪಿಇ ಕಿಟ್ ಹಾಕಿ ಮುಚ್ಚಿದ್ದ ಮೃತದೇಹ ಸತತ 2 ಗಂಟೆಗಳ ಕಾಲ ಮಳೆಯಲ್ಲಿ ನೆನೆದಿತ್ತು. ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *