ಬದಲಾವಣೆಯ ಹರಿಕಾರರು ಜನ, ನಾನಲ್ಲ: ಉಪೇಂದ್ರ

– ನಿರ್ದೇಶನಕ್ಕೆ ಮತ್ತೆ ಬರುತ್ತೇನೆ
– ನಮ್ಮ ಹಕ್ಕನ್ನು ನಾವು ಮಾರಿಕೊಂಡಿದ್ದೇವೆ

ಬೆಂಗಳೂರು: ನಟ ಉಪೇಂದ್ರ ಅವರು ತಮ್ಮ ಪ್ರಜಾಕೀಯದ ಬಗ್ಗೆ ಮಾತನಾಡಲು ಫೇಸ್‍ಬುಕ್ ಲೈವ್ ಬಂದಿದ್ದರು. ಈ ವೇಳೆ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಯಾವ ಪಕ್ಷ ಬರುತ್ತದೆ, ಯಾರು ನಾಯಕ, ಯಾವ ಜಾತಿ ಎಂಬಿತ್ಯಾದಿ ನೋಡಿಕೊಂಡು ನಾವು ಮತ ಹಾಕುತ್ತಿದ್ದೇವೆ. ಆ ರೀತಿ ಆಗಬಾರದು. ಅದು ಸಂಪೂರ್ಣವಾಗಿ ಅಳಿಸಿ ಹೋಗಬೇಕು. ಮತ ಹಾಕುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಮಾತು ಆರಂಭಿಸಿದ ಉಪೇಂದ್ರ ಅವರು ಉತ್ತಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪ್ರಜಾಕೀಯ ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿದರು. ನಾವು ಅಧಿಕಾರಕ್ಕೆ ಬಂದರೆ ಜನರೇ ಸಿಎಂ ಆಗುತ್ತಾರೆ. ಜನಸಾಮಾನ್ಯರೇ ಸಿಎಂ ಎಂದು ಹೇಳುವ ಮೂಲಕ ಜನರ ಮಾತಿಗೆ ಬೆಲೆ ಕೊಡುತ್ತೇವೆ ಎಂದು ಪರೋಕ್ಷವಾಗಿ ಹೇಳಿದರು. ಎಲೆಕ್ಷನ್ ಟೈಮ್‍ನಲ್ಲಿ ರಾಜಕಾರಣಿಗಳು ಬಂದು ನಾವು ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರೆ. ನಂತರ ಮಾಡುವುದಿಲ್ಲ. ಇದು ಜನರಿಗೆ ಅಭ್ಯಾಸವಾಗಿದೆ. ಪ್ರಜೆಗಳಿಗೆ ರಾಜರಾಗಿರಬೇಕು ಎಂಬುದು ನಮ್ಮ ಉದ್ದೇಶ. ಇದೆಲ್ಲವೂ ಸಾಧ್ಯವಿದೆ ಎಂದು ಉಪೇಂದ್ರ ಅಭಿಪ್ರಾಯಪಟ್ಟರು.

ಜನರಲ್ಲಿ ಒಂದು ನಂಬಿಕೆ ಬರಬೇಕು. ಆ ನಂಬಿಕೆ ಬರುವ ಕೆಲಸವನ್ನು ನಾವು ಮಾಡಬೇಕು. ಇಲ್ಲಿ ಪ್ರತಿಯೊಬ್ಬರೂ ಬದಲಾಗಬೇಕು. ಏನೇ ಸಮಸ್ಯೆ ಆದರೂ, ನಮ್ಮ ಪಕ್ಷದಿಂದ ಗೆದ್ದು ಯಾರೂ ಕೆಲಸ ಮಾಡದೆ ಇದ್ದರೆ ಅಂಥ ಸಂದರ್ಭದಲ್ಲಿ ನಾನು ಬರುತ್ತೇನೆ. ನಿಮ್ಮ ನಂಬಿಕೆ ಉಳಿಸಿಕೋಳ್ಳಬೇಕು ನಾನು. ಪ್ರಜಾಕೀಯ ಪಕ್ಷದಲ್ಲಿ ಜವಾಬ್ದಾರಿ ಎನ್ನುವುದು ಯಾರ ಒಬ್ಬರ ಮೇಲೆ ಇರುವುದಿಲ್ಲ. ಎಲ್ಲರ ಮೇಲೆ ಇರುತ್ತದೆ ಎಂದು ಹೀಗೆ ಪಕ್ಷದ ಕುರಿತಾಗಿ ಮಾಹಿತಿಯನ್ನು ಕೊಟ್ಟಿದ್ದಾರೆ. ಬದಲಾವಣೆಯ ಹರಿಕಾರರವು ನೀವಾಗಿದ್ದೀರಾ. ನನಗೆ ಪ್ರತಿಯೊಂದು ವಿಚಾರವನ್ನೂ ನನಗೆ ಕೆಲವು ಮಾಹಿತಿಯನ್ನೂ ನೀವು ಕೊಡುತ್ತಾ ಇದ್ದೀರಾ ಎಂದು ಹೇಳಿದ್ದಾರೆ.

ನಮ್ಮ ಹಕ್ಕನ್ನು ನಾವು ಮಾರಿಕೊಂಡಿದ್ದೇವೆ. ಜಾತಿ, ಧರ್ಮ, ಪಕ್ಷ, ಹಣ, ಪ್ರಚಾರಕ್ಕೆ ಮಾರಿಕೊಂಡು ಮತವನ್ನು ಹಾಕಿದ್ದೇವೆ. ಜನ ಗೆಲ್ಲಬೇಕು, ನೀವು ಪ್ರಶ್ನೆ ಮಾಡಿ ನಿಮ್ಮನ್ನು ಮತ ಕೇಳಲು ಬಂದವರಿಗೆ ಪ್ರಶ್ನಿಸಿ ಆಗ ಅಭಿವೃದ್ಧಿಯಾಗುತ್ತದೆ. ಪ್ರಜೆಗಳು ಪ್ರಭುಗಳಾಗುವುದೇ ನಿಜವಾದ ಪ್ರಜಾಪ್ರಭುತ್ವವಾಗಿದೆ ಎಂದಿದ್ದಾರೆ.

ಉಪೇಂದ್ರ ಅವರು ಮತ್ತೆ ನಿರ್ದೇಶನಕ್ಕೆ ಬರುತ್ತೀರಿ ಎಂದು ಹಲವರು ಕೇಳುತ್ತಿದ್ದಾರೆ. ಖಂಡಿತವಾಗಿಯೂ ಒಂದು ಒಳ್ಳೆಯ ಚಿತ್ರದೊಂದಿಗೆ ಬರುತ್ತೇನೆ. ಕೊರೊನಾದಿಂದ ಎಲ್ಲಾ ಕೆಲಸಗಳು ಮುಂದೂಡಲ್ಪಟ್ಟಿವೆ. ಸದ್ಯ ಎಲ್ಲವೂ ಸಮಸ್ಥಿತಿಗೆ ಬರುತ್ತಿದೆ. ಹೀಗಾಗಿ, ಶೀಘ್ರವೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ. ನನ್ನ ನಿರ್ದೇಶನದ ಸಿನಿಮಾ ಶೀಘ್ರವೇ ಘೋಷಣೆ ಆಗಲಿದೆ ಎಂದರು.

Comments

Leave a Reply

Your email address will not be published. Required fields are marked *