ಬಡವರ ಬಗ್ಗೆ ಕಾಳಜಿ ಇರೋಳು ದೇಶದ ವಿರುದ್ದ ನಡೆದುಕೊಳ್ಳಲು ಸಾಧ್ಯನಾ?: ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಬಡವರ ಬಗ್ಗೆ ಅಷ್ಟು ಕಾಳಜಿ ಇರುವವಳು ದೇಶದ ವಿರುದ್ದ ನಡೆದುಕೊಳ್ಳಲು ಸಾಧ್ಯನಾ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ದಿಶಾ ಪರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಅವರು, ದಿಶಾ ಬಂಧನ ವಿಚಾರ, ಇದೊಂದು ದ್ವೇಷಕ್ಕೆ ಎಡೆ ಮಾಡಿಕೊಡುವ ಕೆಲಸವಾಗಿದೆ. ಕೇಂದ್ರಕ್ಕೆ ಅಧಿಕಾರವಿರುವುದರಿಂದ ಟೂಲ್ ಕಿಟ್ ನಂತಹ ಸಂಸ್ಕೃತಿಯನ್ನು ಬ್ಯಾನ್ ಮಾಡಿ ಎಂದು ಕಿಡಿಕಾರಿದರು.

ಜೊತೆಗೆ, ನನಗೆ ಆ ಹೆಣ್ಣು ಮಗಳ ಹಿನ್ನೆಲೆ ಗೊತ್ತಿಲ್ಲ. ಆದರೆ ಬಡವರ ಬಗ್ಗೆ ಅಷ್ಟು ಕಾಳಜಿ ಇರುವವಳು ದೇಶದ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯನಾ? ಆಕೆಯನ್ನು 15 ದಿನ ಕಸ್ಟಡಿಗೆ ಕೇಳುತ್ತಾರೆ. ದಿಶಾ ಬಂಧನ ಪ್ರತಿ ನಾಗರೀಕರಿಗೆ ಕೊಡುವ ಸ್ವಾತಂತ್ರ್ಯ ಮೊಟಕುಗೊಳಿಸಿದ್ದಂತೆ ಅನ್ನಿಸುತ್ತಿದೆ. ಈ ವಿಚಾರವಾಗಿ ಜನ ಜಾಗೃತಿಯಾಗಬೇಕು ಎಂದು ತಿಳಿಸಿದರು.

ಅಲ್ಲದೆ ಸಿದ್ದರಾಮಯ್ಯ ಅಹಿಂದ ಜಪ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ಇದ್ದಾಗಲೂ ಅಹಿಂದ ಮಾಡಿದ್ದರು. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದರು. ಆಗ ಆ ಸಮಾಜದವರಿಗೆ ಧ್ವನಿ ಕೊಡಲು ಏಕೆ ಸಾಧ್ಯವಾಗಲಿಲ್ಲ. ಈಗ ಏಕೆ ಅಹಿಂದ ಹೆಸರು ಹೇಳುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಮತ್ತೆ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯನವರು ಹೀಗೆ ಹೇಳಿಕೊಂಡು ಹೋಗುತ್ತಿದ್ದಾರೆ. ಬಿಜೆಪಿಯವರು ದೇವರ ಹೆಸರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅಹಿಂದ ಜಪ ಮಾಡುತ್ತಿದ್ದಾರೆ. ರಾಮನ ಹೆಸರಲ್ಲಿ ನಕಲಿಯೋ ಅಸಲಿಯೋ ರಸೀದಿ ಹರಿಯುತ್ತಿದ್ದಾರೆ ಇದು ಸರಿ ಆಗಬೇಕು ಎಂದು ಹೇಳಿದರು.

Comments

Leave a Reply

Your email address will not be published. Required fields are marked *