ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಗಾಲು – ಬೆಳಗಾವಿ ಕುರಿಗಾಹಿಗಳಿಗೆ ಉಡುಪಿಯಲ್ಲಿ ಟೆನ್ಶನ್

ಉಡುಪಿ: ಜಿಲ್ಲೆಯ ಬಕ್ರೀದ್ ಆಚರಣೆಗೆ ಕೊರೊನ ಮಹಾಮಾರಿ ಅಡ್ಡಗಾಲು ಇಟ್ಟಿದೆ. ಮುಸಲ್ಮಾನರ ಪವಿತ್ರ ಮತ್ತು ಅದ್ಧೂರಿ ಹಬ್ಬ ಬಕ್ರೀದ್ ಈ ಬಾರಿ ಕಳೆ ಕಟ್ಟಿಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮುಸಲ್ಮಾನರು ಈ ಬಾರಿ ಸರಳವಾಗಿ ಬಕ್ರೀದ್ ಆಚರಿಸಲು ನಿರ್ಧಾರ ಮಾಡಿದಂತಿದೆ.

ಪ್ರತಿ ವರ್ಷ ಬಕ್ರೀದ್ ಬಂದಾಗ ಉಡುಪಿ ನಗರದ ಬೀಡಿನಗುಡ್ಡೆ ಮೈದಾನದಲ್ಲಿ ನಾಲ್ಕು ದಿನದಲ್ಲಿ ಸಾವಿರದ ಇನ್ನೂರು ಆಡು ಮತ್ತು ಕುರಿ ವ್ಯಾಪಾರ ಆಗುತ್ತಿತ್ತು. ಈ ಬಾರಿ ಕೇವಲ 250 ರಿಂದ ಮುನ್ನೂರು ಆಡುಗಳು ಮಾರಾಟವಾಗಿದೆ.

ಕಳೆದ ಹದಿನೈದು ವರ್ಷಗಳಿಂದ ಗುಳೇದಗುಡ್ಡ ನಿವಾಸಿ ರಾಮಪ್ಪ ಐಹೊಳೆ ಬಕ್ರೀದ್‍ಗಾಗಿ ಆಡು ಕುರಿಗಳನ್ನು ಹೊತ್ತು ಉಡುಪಿಗೆ ಬರುತ್ತಾರೆ. ಕಳೆದ ಬಾರಿ ಸಾವಿರದ ಇನ್ನೂರಕ್ಕೂ ಹೆಚ್ಚು ಆಡು ವ್ಯಾಪಾರವಾಗಿತ್ತು. ಈ ಬಾರಿ ಹಬ್ಬದ ಹಿಂದಿನ ದಿನದವರೆಗೂ ಮುನ್ನೂರು ಆಡುಗಳು ಸೇಲಾಗಿದೆ. ನಾವು ಆಡು ಕುರಿಯನ್ನೇ ನಂಬಿ ಜೀವನ ಮಾಡುವವರು. ಈ ಬಾರಿ ಕೊರೊನಾ ಸಂಕಷ್ಟ ಬಂದಿದೆ, ಮಾರುಕಟ್ಟೆ ಇಲ್ಲ ಎಂದಿದ್ದಾರೆ.

ವ್ಯಾಪಾರ ಆದರೆ ನಾವು ಜೀವನ ನಿರ್ವಹಣೆ ಮಾಡುತ್ತೇವೆ. ಎರಡು, ಮೂರು ಕುರಿಗಳನ್ನು ಖರೀದಿಸುತ್ತಿದ್ದ ಪರ್ಮನೆಂಟ್ ಗಿರಾಕಿಗಳು, ಈ ಬಾರಿ ಒಂದು ಕುರಿಯನ್ನು ಖರೀದಿಸಿದ್ದಾರೆ. ಬೆಳಗಾವಿಯಿಂದ ಇಲ್ಲಿಯ ತನಕ ನಾವು ಬಂದು ವ್ಯಾಪಾರ ಮಾಡುತ್ತಿದ್ದೇವೆ. ಕೊರೊನಾ ನಮಗೆ ಬಹಳ ನಷ್ಟಕ್ಕೆ ಕಾರಣವಾಗಿದೆ ಎಂದು ರಾಮಪ್ಪ ಹೇಳಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿ ತಾಲಿಬ್, ಕಳೆದ ಬಾರಿ ನಾವು ಮೂರು ಆಡು ಖರೀದಿ ಮಾಡಿದ್ದೇವೆ. ಈ ಬಾರಿ ಒಂದು ತೆಗೆದುಕೊಂಡಿದ್ದೇವೆ. ರಂಜಾನ್ ಹಬ್ಬಕ್ಕೂ ಬಟ್ಟೆ ಖರೀದಿ ಮಾಡಿಲ್ಲ. ಕೊರೊನಾದಿಂದ ವ್ಯಾಪಾರ ಇಲ್ಲ. ನಮ್ಮ ಬಳಿ ಹಣ ಕೂಡಾ ಟರ್ನ್ ಓವರ್ ಆಗುತ್ತಿಲ್ಲ. ನಮ್ಮ ಬೇಡಿಕೆ ಗಾತ್ರದ ಆಡು ಕೂಡಾ ಸಿಕ್ಕಿಲ್ಲ ಎಂದರು.

Comments

Leave a Reply

Your email address will not be published. Required fields are marked *