ಬಕೆಟ್ ಹಿಡಿಯುವ ರಾಜಕಾರಣಿಯಾಗಿದ್ರೆ ಬಹಳ ಹಿಂದೆಯೇ ಮಂತ್ರಿಯಾಗ್ತಿದ್ದೆ : ಸಚಿವ ಸಿ.ಟಿ.ರವಿ

ಚಿಕ್ಕಮಗಳೂರು: ಹೊಗಳಿಕೊಂಡು, ಬಕೆಟ್ ಹಿಡಿಯುವ ರಾಜಕಾರಣಿಯಾಗಿದ್ದರೆ ನಾನು ಮಂತ್ರಿಯಾಗಲು 2012ರವರೆಗೆ ಕಾಯಬೇಕಿರಲಿಲ್ಲ. ಬಹಳ ಮುಂಚೆಯೇ ಮಂತ್ರಿ ಆಗುತ್ತಿದ್ದೆ. ನನಗೆ ಅಧಿಕಾರ ಮತ್ತು ಜವಾಬ್ದಾರಿ ಎಂದು ಬಂದಾಗ ಜವಾಬ್ದಾರಿ ತೆಗೆದುಕೊಳ್ಳಲು ಉತ್ಸುಕನಾಗಿರುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಎಐಟಿ ಕಾಲೇಜು ಬಳಿ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಬಳಿಕ ಮಾತನಾಡಿದ ಅವರು, ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ನನ್ನದ್ದಲ್ಲ. ಮಂತ್ರಿಸ್ಥಾನ ನನಗೆ ಸಿಕ್ಕಿರುವ ಅಧಿಕಾರ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನನಗೆ ಸಿಕ್ಕಿರೋ ಜವಾಬ್ದಾರಿ. ಇವೆರಡರಲ್ಲಿ ಜವಾಬ್ದಾರಿಯ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಇದನ್ನು ಓದಿ: ಅತ್ತೆ-ಸೊಸೆ, ತಾಯಿ-ಮಗಳಂತೆ ಚೆನ್ನಾಗಿರಲಿ: ಸಿ.ಟಿ ರವಿ

ಅಧಿಕಾರದ ವ್ಯಾಮೋಹದಿಂದ ಜವಾಬ್ದಾರಿಯ ಕೆಲಸಕ್ಕೆ ಹಿನ್ನೆಡೆಯಾಗಬಾರದು. ಅದಕ್ಕಾಗಿಯೇ ಕಳೆದ ತಿಂಗಳು 30ರಂದೇ ರಾಜೀನಾಮೆ ನೀಡಿದ್ದೇನೆ. ನಿನ್ನೆ ಕೂಡ ನನ್ನ ರಾಜೀನಾಮೆಯನ್ನ ಅಂಗೀಕರಿಸುವಂತೆ ಸಿಎಂಗೆ ಕೇಳಿಕೊಂಡಿದ್ದೇನೆ ಎಂದರು. ಇದೇ ವೇಳೆ ಬಿಹಾರ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಹಾರದಲ್ಲಿ ನಿತೀಶ್ ಕುಮಾರ್ ಹಾಗೂ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಮತ್ತೆ ಅಧಿಕಾರಕ್ಕೆ ಬರುತ್ತೆ. ಬಿಜೆಪಿ ಸಿಂಗಲ್ ಲಾರ್ಜಸ್ಟ್ ಪಾರ್ಟಿ ಎನ್ನುತ್ತಿದ್ದಾರೆ ಎಂದರು.

ಆಂತರಿಕ ಹಾಗೂ ಮಾಧ್ಯಮಗಳ ವರದಿ ಕೂಡ ನಿತೀಶ್ ನೇತೃತ್ವದ ಎನ್.ಡಿ.ಎ ಅಧಿಕಾರಕ್ಕೆ ಬರುತ್ತೆ ಎನ್ನುತ್ತಿದೆ. ಪ್ರಧಾನಿ ಮೋದಿ ರ್ಯಾಲಿಗೆ ಸೌಲಭ್ಯ ಇಲ್ಲದಿದ್ದರೂ ದೊಡ್ಡ ಪ್ರಮಾಣದಲ್ಲಿ ಜನ ಬರುತ್ತಿದ್ದಾರೆ. ನಾನು ಹೋದಾಗಲೂ ಕೂಡ ಜನ ಎಲ್ಲಾ ಸೌಲಭ್ಯ ಸಿಕ್ಕಿದೆ ಎಂದಿದ್ದಾರೆ. ಜನರಿಗೆ ಕೇಂದ್ರದ ಯೋಜನೆಯ ಲಾಭ ತಲುಪಿದೆ. ಇದರಿಂದ ಸೈಲೆಂಟ್ ವೋಟರ್ಸ್ ಹಾಗೂ ಮಹಿಳೆಯರು ಬಿಜೆಪಿಗೆ ಮತ ಹಾಕುತ್ತಾರೆ. ಗೂಂಡಾ ರಾಜ್ಯ ಕಾನೂನು ಸುವ್ಯವಸ್ಥೆ ಇಲ್ಲದ್ದನ್ನು ಕಂಡವರಿಗೆ ಈಗ ನಿತೀಶ್ ಕುಮಾರ್ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ಜೊತೆಗೆ ಕೆಲಸವೂ ಆಗುತ್ತಿರುವುದರಿಂದ ಮತವಾಗಿ ಪರಿವರ್ತನೆಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *