ಬಂಡೆ, ಹುಲಿ ತಾಲಿಬಾನಿ ನಾಯಕರ ಹೆಸರಿನಂತಿದೆ: ಕಟೀಲ್

ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಾಲಿಬಾನಿಗಳಿಗೆ ಹೋಲಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಕಟೀಲ್, ತಾಲಿಬಾನಿಗಳ ತರ ಹುಲಿ, ಬಂಡೆ ಅಂತ ಇವರೂ ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಚರ್ಚಾಸ್ಪದ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಪ್ರಶಿಕ್ಷಣ ವರ್ಗ ಸಭೆ ಉಡುಪಿಯ ಶಾರದಾ ಇಂಟರ್ ನ್ಯಾಷನಲ್‍ನಲ್ಲಿ ನಡೆಯುತ್ತಿದೆ. ಮೂರು ಜಿಲ್ಲೆಗಳ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಟೀಲ್ ಅವರು, ತಾಲಿಬಾನಿಗಳು ಕೂಡ ಮಿಲಿಟಂಟ್, ಕ್ಯಾಪ್ಟನ್ ಅಂತ ಬೇರೆ ಬೇರೆ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಸಿದ್ದರಾಮಯ್ಯ, ಡಿಕೆಶಿ ಅವರು ಬಂಡೆ, ಹುಲಿ ಅಂತ ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ. ಚುನಾವಣೆಯ ನಂತರ ಬಂಡೆಯೂ ಇಲ್ಲ, ಹುಲಿಯೂ ಇಲ್ಲದ ದುಸ್ಥಿತಿಗೆ ಕಾಂಗ್ರೆಸ್ ತಳ್ಳಲ್ಪಟ್ಟಿದೆ ಎಂದು ಟೀಕೆ ಮಾಡಿದರು.

ಬಿಎಸ್‍ವೈ ಸರ್ವಸಮ್ಮತ ನಾಯಕ: ಉಪ ಚುನಾವಣೆ ಸಂದರ್ಭ ಸಿಎಂ ಯಡಿಯೂರಪ್ಪ ಮತ್ತು ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದರು. ಮುಂದೆ ಎರಡು ವಿಧಾನಸಭೆ, ಒಂದು ಲೋಕಸಭಾ ಚುನಾವಣೆ ಬರುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರು ಗೆಲ್ಲುತ್ತದೆ. ಮುಂದಿನ ಚುನಾವಣೆಗಳಿಗೂ ನಾವು ಪೂರ್ಣ ತಯಾರಿ ಮಾಡಿಕೊಂಡಿದ್ದೇವೆ. ಪಂಚಾಯತ್ ಚುನಾವಣೆಗಳಲ್ಲೂ ಬಿಜೆಪಿ ಶೇ.80 ಮತ ಪಡೆಯಲಿದೆ. ಸಿಎಂ ಸ್ಥಾನ ಬದಲಾಗುತ್ತೆ ಎಂದು ಜನರಲ್ಲಿ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ಮಾಡಿದ್ದರು. ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಯ ಚರ್ಚೆಯೇ ಇಲ್ಲ. ಮುಂದಿನ ಎರಡೂವರೆ ವರ್ಷಗಳ ಕಾಲ ಅವರೇ ನಮ್ಮ ಸರ್ವಸಮ್ಮತ ನಾಯಕ ಎಂದು ಕಟೀಲ್ ಘೋಷಿಸಿದರು.

30 ಸ್ಥಾನ ಗೆಲ್ಲಲ್ಲ: ಹುಡುಗನಿಗೆ ಪ್ರಾಯ ಆಗಿದೆ. ಮದುವೆಗೆ ಹುಡುಗಿ ಹುಟ್ಟಿಯೇ ಇಲ್ಲ. ಮದುವೆ ನಿಶ್ಚಯಕ್ಕೂ ಮೊದಲೇ ಮಗುವಿಗೆ ಹೆಸರಿಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಮುಂದಿನ ನಾಯಕತ್ವಕ್ಕೆ ಕಟೀಲ್ ಲೇವಡಿ ಮಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಈಗಲೇ ಯಾರು ಮುಖ್ಯಮಂತ್ರಿ ಎಂಬ ಚರ್ಚೆ ಆರಂಭವಾಗಿದೆ. ಸಿದ್ರಾಮಣ್ಣ ನಾನೇ ಮುಖ್ಯಮಂತ್ರಿ ಅಂತಾರೆ. ಜಮೀರ್ ಅಹ್ಮದ್ ಸಿದ್ದರಾಮಯ್ಯನೇ ಮುಖ್ಯಮಂತ್ರಿ ಅಂತಾರೆ. ಸೌಮ್ಯಾ ರೆಡ್ಡಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಅಂತಾರೆ. ನಾಯಕತ್ವದ ಗೊಂದಲ ಇರೋದು ಕಾಂಗ್ರೆಸ್‍ನಲ್ಲಿ ಮಾತ್ರ. ಸಂಗೀತ ಕುರ್ಚಿ ಸ್ಪರ್ಧೆ ಆರಂಭವಾಗಿರುವುದು ಕಾಂಗ್ರೆಸ್‍ನಲ್ಲಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 30 ಸ್ಥಾನಕ್ಕೆ ಸೀಮಿತವಾಗುತ್ತದೆ ಎಂದು ಕಟೀಲ್ ಭವಿಷ್ಯ ನುಡಿದರು.

Comments

Leave a Reply

Your email address will not be published. Required fields are marked *